

ಹಿರಿಯೂರು: ಕುರಿಗಾಹಿಗಳಿಗೆ ನೆರವಾಗುವ ಅನುಗ್ರಹ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಮುಂದುವರಿಸುವ ಮೂಲಕ ಉತ್ತಮ ಕೆಲಸ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಡಾ.ಸಾಸಲು ಸತೀಶ್ ತಿಳಿಸಿದರು.
ತಾಲೂಕಿನ ವಿ.ಕೆ.ಗುಡ್ಡ ಗ್ರಾಮದಲ್ಲಿ ವಿಷ ಆಹಾರ ಸೇವಿಸಿ ಕುರಿಗಳು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಕುರಿಗಾಹಿ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ನೀಡಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಅನುಗ್ರಹ ಯೋಜನೆ ಮುಂದುವರಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರೆದ ಪತ್ರಕ್ಕೆ ಸಿಎಂ ಬಿಎಸ್‌ವೈ ಸ್ಪಂದಿಸುವ ಮೂಲಕ ಕುರಿಗಾಹಿಗಳ ಹಿತ ರಕ್ಷಿಸಿದ್ದಾರೆ ಎಂದರು.
ಹಿರಿಯೂರು ತಾಲೂಕಿನ ಜತೆ ಉತ್ತಮ ಒಡನಾಟವಿದೆ. ಅವಕಾಶ ಸಿಕ್ಕರೆ ಜನಸೇವೆ ಮಾಡಲು ಸಿದ್ಧ ಎಂದು ತಿಳಿಸಿದರು.
ನಗರಸಭೆ ಸದಸ್ಯ ಚಿತ್ರಜಿತ್ ಯಾದವ್, ಮುಖಂಡರಾದ ತಿಪ್ಪೀರಣ್ಣ, ಮ್ಯಾಕ್ಲೂರಹಳ್ಳಿ ತಿಮ್ಮಯ್ಯ, ಕರವೇ ಅಧ್ಯಕ್ಷ ಕೃಷ್ಣಮೂರ್ತಿ, ರಾಮಣ್ಣ, ಪ್ರಭು ಯಾದವ್, ರಾಜಣ್ಣ, ಹನುಮಂತರಾಯ ಇತರರಿದ್ದರು.