ಹಿರಿಯೂರು-ಸಿಗೇಹಟ್ಟಿವರೆಗಿನ ರಸ್ತೆ ದುರಸ್ತಿಗೆ ಆಗ್ರಹ

HYR RAITHA 24 (1)
Published on

ಹಿರಿಯೂರು: ತಾಲೂಕಿನ ಹುಲಗಲಕುಂಟೆ ಬಸ್ ನಿಲ್ದಾಣದಲ್ಲಿ ಸೋಮವಾರ ಹಿರಿಯೂರಿಂದ ಸೀಗೇಹಟ್ಟಿ ಗ್ರಾಮದ ವರೆಗಿನ ಬೀದರ್-ಶ್ರೀರಂಗಪಟ್ಟಣ ರಸ್ತೆ ಡಾಂಬರೀಕರಣಕ್ಕೆ ಆಗ್ರಹಿಸಿ ರೈತ ಸಂಘ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ರಸ್ತೆ ತಡೆ ನಡೆಸಿದವು.

ನಗರದಿಂದ ಸೀಗೇಹಟ್ಟಿ ವರೆಗಿನ ರಸ್ತೆ ಅತ್ಯಂತ ಕಿರಿದಾಗಿದ್ದು, ಸಂಪೂರ್ಣ ಹಾಳಾಗಿದೆ. ಇದರ ಅಳುದ್ದದ ಗುಂಡಿಯಲ್ಲಿ ವಾಹನ ಓಡಿಸುವುದು ಸವಾರರಿಗೆ ಸವಾಲಿನ ಕೆಲಸವಾಗಿದೆ.

ಈ ಹದಗೆಟ್ಟ ರಸ್ತೆಯಲ್ಲಿ ಬಿದ್ದು ಅನೇಕ ಬೈಕ್ ಸವಾರರು ಕೈ ಕಾಲುಗಳಿಗೆ ಪೆಟ್ಟು ಮಾಡಿಕೊಂಡಿದ್ದಾರೆ, ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಜಿಪಂ ಸದಸ್ಯ ಆರ್.ನಾಗೇಂದ್ರನಾಯ್ಕ ಮಾತನಾಡಿ, ಹಲವು ವರ್ಷಗಳಿಂದಲೂ ಕೇವಲ ಮಾಹಿತಿ ಪಡೆಯುತ್ತಿರುವ ಅಧಿಕಾರಿಗಳಿಂದ ಈತನಕ ರಸ್ತೆ ದುರಸ್ತಿ ಆಗಿಲ್ಲ. ಈಚೆಗೆ ಬೈಕ್ ಸವಾರರೊಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಅನಾಹುತಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣವಾಗಿದೆ ಎಂದು ದೂರಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಚ್.ಸಿ.ನಾಗೇಂದ್ರ, ಈಗಾಗಲೇ 180 ಕೋಟಿ ರೂ. ವೆಚ್ಚದಲ್ಲಿ ಹಿರಿಯೂರು-ದೊಡ್ಡ ಬ್ಯಾಲದಕೆರೆ ವರೆಗಿನ ರಸ್ತೆ ಅಭಿವೃದ್ಧಿಗೆ ಯೋಜನಾ ವರದಿ ತಯಾರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅನುಮೋದನೆಗೆ ಕಳುಹಿಸಿದ್ದು, ಮುಂದಿನ ಮೂರು ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಇದನ್ನು ಒಪ್ಪದ ಪ್ರತಿಭಟನಕಾರರು, ನಿಮ್ಮ ಭರವಸೆ ನಮಗೆ ಬೇಡ. ಇಂದಿನಿಂದಲೇ ರಸ್ತೆ ದುರಸ್ತಿ ಕಾರ್ಯ ಆರಂಭಿಸಬೇಕು. ಈಗ ಮೂರು ತಿಂಗಳೊಳಗೆ ಕೆಲಸ ಆರಂಭಿಸುವುದಾಗಿ ಹೇಳಿ ಮೂರು ವರ್ಷವಾದರೂ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ ನೀವು ಕೆಲಸ ಆರಂಭಿಸುವವರೆಗೆ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟುಹಿಡಿದರು.

ಅಂತಿಮವಾಗಿ ಇಂಜಿನಿಯರ್, ಹಿರಿಯೂರು-ಸಿಗೇಹಟ್ಟಿ ವರೆಗಿನ ರಸ್ತೆ ದುರಸ್ತಿಗೆ 3 ಕೋಟಿ ರೂ. ವೆಚ್ಚವಾಗುತ್ತದೆ. ನಾಳೆಯೇ ವರದಿ ತಯಾರಿಸಿ ಮೇಲಧಿಕಾರಿಗಳ ಅನುಮೋದನೆ ಪಡೆದು ಹತ್ತು ದಿನಗಳೊಳಗೆ ದುರಸ್ತಿ ಕಾರ್ಯ ಆರಂಭಿಸುತ್ತೇನೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ತಾಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ರೈತ ಮುಖಂಡರಾದ ಬಿ.ಒ.ಶಿವಕುಮಾರ್, ದಸ್ತಗಿರಿ ಸಾಬ್, ಲಕ್ಷ್ಮೀಕಾಂತ್, ಶ್ರೀನಿವಾಸ್, ವಿ.ಕಲ್ಪನಾ, ಶಶಿಕಲಾ, ಡಿಎಸ್‌ಎಸ್ ತಿಮ್ಮರಾಜ್, ವೆಂಕಟೇಶ್, ಕಿರಣ್‌ಕುಮಾರ್, ತಿಪ್ಪೇಸ್ವಾಮಿ, ಆಟೋ ಚಾಲಕರ ಸಂಘದ ಅಧ್ಯಕ್ಷ ರಂಗನಾಥ್, ಕಾಂತರಾಜ್, ತೇಜಪ್ಪ, ಸೋಮಣ್ಣ, ಅಬ್ದುಲ್ ರೆಹಮಾನ್, ಹೊಟೇಲ್ ಮಾಲೀಕರ ಸಂಘ, ಮಹಿಳಾ ಸಂಘದ ಪದಾಧಿಕಾರಿಗಳು, ಡಿವೈಎಎಸ್‌ಪಿ ರಮೇಶ್, ಸಿಪಿಐ ಚನ್ನೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net