ಬಯಲುಸೀಮೆಯಲ್ಲಿ ಅಡಕೆ ಕೃಷಿ ದಾಖಲೆ

dj hyr adake
Published on

ಖಂಡೇನಹಳ್ಳಿ ಬಸವರಾಜ್ ಹಿರಿಯೂರು
ಭದ್ರೆ ಬಯಲುಸೀಮೆ ಸ್ಪರ್ಶಿಸಿದ್ದು, ಕಳೆದ ವರ್ಷ ವರುಣನ ಕೃಪೆಯಿಂದ ಜಿಲ್ಲೆಯಲ್ಲಿ ಕೆರೆ, ಕಟ್ಟೆಗಳು ಮೈದುಂಬಿ, ಅಂತರ್ಜಲ ಹೆಚ್ಚಳದ ಪರಿಣಾಮ ಮಳೆಯಾಶ್ರಿತ ಪ್ರದೇಶದಲ್ಲಿ ಅಡಕೆ ಕೃಷಿ ದಾಖಲೆ ಪ್ರಮಾಣದಲ್ಲಿ ವಿಸ್ತರಣೆಯಾಗಿದೆ.

ಜಿಲ್ಲೆಯ ವ್ಯಾಪ್ತಿಯಲ್ಲಿ 2021-22ನೇ ವರ್ಷದಲ್ಲಿ 43,770, ಪ್ರಸಕ್ತ ವರ್ಷ 53,687 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆ ವಿಸ್ತರಣೆ ಕಂಡಿದೆ.

ಬಯಲು ಸೀಮೆಯಲ್ಲಿ ಮಳೆಯ ಪ್ರಮಾಣ ಕಡಿಮೆ, ಇಲ್ಲಿ ಅಡಕೆ ಬೆಳೆಯಲು ಸೂಕ್ತ ಪ್ರದೇಶವಲ್ಲ.

ಆದರೆ, ನಾಲ್ಕೈದು ವರ್ಷದಿಂದ ಅಡಕೆಗೆ ಬಂಗಾರದ ಬೆಲೆ ಬಂದಿದ್ದು, ಕೂಲಿ ಕಾರ್ಮಿಕರ ಸಮಸ್ಯೆ, ನಿರ್ವಹಣೆ, ವೆಚ್ಚ ಕಡಿಮೆ ಎಂಬ ಕಾರಣಕ್ಕೆ ರೈತರು ಅಡಕೆ ಕೃಷಿಯತ್ತ ಚಿತ್ತ ಹರಿಸಿದ್ದಾರೆ.

ಆದರೆ, ಭವಿಷ್ಯದಲ್ಲಿ ಏಕಬೆಳೆ ಪದ್ಧತಿ ಅಪಾಯ, ನಷ್ಟ ತಂದೊಡ್ಡುವ ಸಾಧ್ಯತೆಯೇ ಹೆಚ್ಚು.

ರಾಷ್ಟ್ರೀಯ ತೋಟಗಾರಿಕೆ ಮಂಡಳಿ ನಿರ್ದೇಶಕ ಡಾ.ಗೋರಕ್ ಸಿಂಗ್, ಬಯಲುಸೀಮೆ ಪ್ರದೇಶದಲ್ಲಿ ಅಡಕೆ ಬೆಳೆಯದಂತೆ ಎಚ್ಚರಿಸಿ, ಭವಿಷ್ಯದಲ್ಲಿ ಎದುರಾಗುವ ಸಮಸ್ಯೆ ಕುರಿತು 2004ರಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಜಿಲ್ಲೆಯ ಅರೆಮಲೆನಾಡು ತಾಲೂಕುಗಳಾದ ಹೊಳಲ್ಕೆರೆ, ಹೊಸದುರ್ಗ ಹಾಗೂ ಹಿರಿಯೂರಿನ ವಿವಿ ಸಾಗರ ಅಚ್ಚುಕಟ್ಟು ಪ್ರದೇಶದಲ್ಲಿ ಕಡಿಮೆ ಸಂಖ್ಯೆಯಲ್ಲಿ ಅಡಕೆ ಕೃಷಿ ಮಾಡಲಾಗುತ್ತಿತ್ತು.

ಈಚೆಗೆ ಈ ಪ್ರದೇಶ ಸೇರಿ ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು, ಶಿರಾ, ಪಾವಗಡ, ಮಧುಗಿರಿ ತಾಲೂಕಿನಲ್ಲಿ ಅಡಕೆ ಕೃಷಿ ವಿಸ್ತರಣೆ ದಾಖಲೆಮಟ್ಟದಲ್ಲಿ ಹೆಚ್ಚಾಗಿದೆ.

70 ವರ್ಷಗಳ ಕಾಲ ಬರ ಕಂಡ ಬಯಲುಸೀಮೆ, ಅಂತರ್ಜಲ ಕುಸಿತ ಕಾರಣಕ್ಕೆ ಅಡಕೆ ಬೆಳೆ ವಿಸ್ತರಣೆ ಮಾಡದಂತೆ, ಏಕಬೆಳೆ ಪದ್ಧತಿ ಅಪಾಯದ ಕುರಿತು ರೈತರಿಗೆ ಸಲಹೆ-ಸೂಚನೆ ನೀಡಬೇಕು ಎಂದು ಗೋರಕ್ ಸಿಂಗ್ ವರದಿ ತಿಳಿಸಿದೆ.

2015-2018ರ ಅವಧಿಯಲ್ಲಿ ಭೀಕರ ಬರಗಾಲ, ಅಂತರ್ಜಲ ಕುಸಿತದಿಂದ ವಿವಿ ಸಾಗರ ಅಚ್ಚುಕಟ್ಟು ಪ್ರದೇಶ ಸೇರಿ ಜಿಲ್ಲೆಯ ಎಲ್ಲೆಡೆ ಸಾಲು ಸಾಲಾಗಿ ಅಡಕೆ-ತೆಂಗಿನ ತೋಟಗಳು ಒಣಗಿ, ರೈತರ ಬದುಕು ಮೂರಾಬಟ್ಟೆಯಾಗಿತ್ತು.

2018ರಲ್ಲಿ ರೈತರು ಅಡಕೆ ಗಿಡ ಉಳಿಸಲು ಟ್ಯಾಂಕರ್ ಮೂಲಕ ನೀರು ಪೂರೈಸಿದರೂ ಸಾಧ್ಯವಾಗಲಿಲ್ಲ. ಆದರೂ ಕಳೆದ ಎರಡು ವರ್ಷದಿಂದ ಅಡಕೆ ತೋಟ ಕಟ್ಟುವ ಕಾರ್ಯ ಹೆಚ್ಚಾಗುತ್ತಲೇ ಇದೆ.

ಬಯಲುಸೀಮೆ ಸಂಪೂರ್ಣ ಮಳೆಯಾಶ್ರಿತ ಶೇಂಗಾ, ಸೂರ್ಯ ಕಾಂತಿ, ಹತ್ತಿ, ಜೋಳ, ಕಡಲೆ ಬೆಳೆಗಳನ್ನು ಅವಲಂಬಿಸಿದೆ.

ಇಂತಹ ಪ್ರದೇಶದಲ್ಲಿ ಅಡಕೆ ಸಸಿ ನಾಟಿ ಸಮಸ್ಯೆಯೇ ಹೆಚ್ಚು. ಒಂದು ಅಡಕೆ ಗಿಡ ದಿನಕ್ಕೆ 15-20 ಲೀಟರ್ ನೀರಿನ ಅವಶ್ಯವಿದೆ.

ನಿರಂತರ ಒಂದೆರಡು ತಿಂಗಳ ಕಾಲ ನೀರು ಹರಿಸದಿದ್ದರೆ ಐದಾರು ವರ್ಷ ಚಿಕ್ಕ ಮಕ್ಕಳಂತೆ ಆರೈಕೆ ಮಾಡಿ ಬೆಳೆಸಿದ ಅಡಕೆ ಮರಗಳು ಒಣಗಿ ನಾಶವಾಗುತ್ತದೆ.

ಫಲ ನೀಡುವ ಸಮಯದಲ್ಲಿ ಒಣಗಿದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರೈತರು ನಷ್ಟ ಅನುಭವಿಸಬೇಕಾಗುತ್ತದೆ.

ಮಲೆನಾಡು ಭಾಗದಲ್ಲಿ ಸೂಕ್ಷ್ಮ ಹವಾಮಾನ ಇದ್ದರೆ ಬಯಲು ಸೀಮೆಯಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ಇದು ಅಡಕೆ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ.

ಪ್ರತ್ಯೇಕ ವಿಮೆ ಸೌಲಭ್ಯ: ಅಡಕೆ ಕೃಷಿಗೆ ಹನಿ ನೀರಾವರಿ ಸಬ್ಸಿಡಿ ಅನುದಾನ ನಿಲ್ಲಿಸಲಾಗಿದೆ. ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ, ಅಡಕೆಗೆ ಪ್ರತ್ಯೇಕ ವಿಮೆ ಪಾವತಿಸಲು ಅವಕಾಶವಿದೆ.

ಬಯಲುಸೀಮೆ ರೈತರು ಆರ್ಥಿಕ ಲಾಭ, ವೈಯಕ್ತಿಕ ಆಸಕ್ತಿಯಿಂದ ಅಡಕೆ ಕೃಷಿಯತ್ತ ಹೆಚ್ಚು ಗಮನ ಹರಿಸಿದ್ದಾರೆ. ಏಕ ಬೆಳೆ ಪದ್ಧತಿ ಮಾರಕ, ಮಿಶ್ರ ಬೆಳೆ ಪದ್ಧತಿ ರೈತರ ರಕ್ಷಕನಿದ್ದಂತೆ. ಏಕ ಬೆಳೆ ಪದ್ಧತಿ ನಷ್ಟ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.ಡಾ.ಓ.ಕುಮಾರ್, ಮುಖ್ಯಸ್ಥ, ಬಬ್ಬೂರು ಕೃಷಿ ವಿಜ್ಞಾನ ಕೇಂದ್ರ ರೈತರು ಸ್ವ ಇಚ್ಛೆಯಿಂದ ಅಡಕೆ ಕೃಷಿಯಲ್ಲಿ ತೊಡಗಿದ್ದಾರೆ, ತೋಟಗಾರಿಕೆ ಇಲಾಖೆಯಿಂದ ಯಾವುದೇ ಸೌಲಭ್ಯ ನೀಡುತ್ತಿಲ್ಲ, ವಿವಿ ಸಾಗರ ಜಲಾಶಯ ಭರ್ತಿಯಾದ ನಂತರ ಅಡಕೆ ಕೃಷಿ ವಿಸ್ತರಣೆ ಹೆಚ್ಚಾಗಿದೆ, ಏಕ ಬೆಳೆ ಪದ್ಧತಿ ಅಪಾಯ, ಮಿಶ್ರ ಬೇಸಾಯದಿಂದ ಹೆಚ್ಚಿನ ಲಾಭ ಪಡೆಯಬಹುದಾಗಿದೆ. ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.ಡಾ.ಜಿ.ಸವಿತಾ, ಅಧಿಕಾರಿ, ತೋಟಗಾರಿಕೆ ಇಲಾಖೆ ನಾಲ್ಕೈದ ವರ್ಷದಿಂದ ಅಡಕೆ ಬೆಳೆಗೆ ಬಂಪರ್ ಬೆಲೆ ಬಂದಿದೆ, ಮಿಶ್ರ ಬೇಸಾಯದಲ್ಲಿ ಕೂಲಿ ಕಾರ್ಮಿಕರ ಬೇಡಿಕೆ ಹೆಚ್ಚು, ವೆಚ್ಚ ಅಧಿಕ, ಆದ್ದರಿಂದ ಅಡಕೆ ಬೆಳೆಯುತ್ತಿದ್ದೇವೆ, ಏಕ ಬೆಳೆ ಪದ್ಧತಿ ಅಪಾಯ, ಆದರೆ ರೈತರು ಅಡಕೆ ಕೃಷಿಯತ್ತ ಚಿತ್ತ ಹರಿಸಿದ್ದಾರೆ. ಭವಿಷ್ಯದಲ್ಲಿ ಏನಾಗುತ್ತದೆ ಎಂಬುದು ಗೊತ್ತಿಲ್ಲ.ಉದಯ್‌ಕುಮಾರ್, ಅಡಕೆ ಬೆಳೆಗಾರ, ಹಿರಿಯೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net