

ಹಿರಿಯೂರು: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಿಪ್ಪೂರಿನ ರೈತರ ತೋಟದಲ್ಲಿದ್ದ ತೆಂಗು-ಅಡಕೆ ಮರಗಳನ್ನು ಕಡಿಸಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಮಂಗಳವಾರ ರಾಜ್ಯ ರೈತ ಸಂಘ, ಹಸಿರು ಸೇನೆ ಆಲೂರು ಘಟಕದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಜಿ.ಎಚ್. ಸತ್ಯನಾರಾಯಣಗೆ ಮನವಿ ಸಲ್ಲಿಸಿದರು.
ರಸ್ತೆ ವಿಸ್ತರಣೆ ನೆಪದಲ್ಲಿ ರೈತರ ಕಣ್ಣೆದುರೇ ಮರಗಳನ್ನು ಕಡಿದಿರುವುದು ಖಂಡನೀಯ. ಯಾವುದೇ ಮರ ಗಿಡ ಕಡಿಯುವ ಮುಂಚೆ ಅರಣ್ಯ ಇಲಾಖೆ ಅನುಮತಿ ಪಡೆಯಬೇಕು. ಸರ್ಕಾರಿ ಜಾಗ ಆಗಿದ್ದರೆ ಮೊದಲೇ ವಶಕ್ಕೆ ಪಡೆಯಬೇಕಿತ್ತು. ಇದ್ಯಾವುದನ್ನೂ ಮಾಡದೇ ಕೆಲವರು ಜಿಲ್ಲಾಧಿಕಾರಿಗೆ ಮಾಡಿದ್ದ ಮನವಿಯನ್ನೇ ಅಸ್ತ್ರವಾಗಿಸಿಕೊಂಡು ಕ್ರಮ ಕೈಗೊಂಡಿದ್ದು ಸರಿಯಲ್ಲ ಎಂದು ದೂರಿದರು.
ಕೂಡಲೇ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಬೇರೆಲ್ಲೂ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಮುಖಂಡರಾದ ಕಸವನಹಳ್ಳಿ ರಮೇಶ್, ಸಿದ್ದರಾಮಣ್ಣ, ರೈತರಾದ ವೀರಣ್ಣಗೌಡ, ನೀಲಕಂಠ, ಜಯರಾಮ್, ನಾಗೇಶ್, ಗೀತಮ್ಮ, ಕಲಾವತಿ ಮತ್ತಿತರರಿದ್ದರು.