

ಹಿರಿಯೂರು: ತಾಲೂಕಿನ ಸಾಲುಣಸೆ ಗ್ರಾಮದ ವೇದಾವತಿ ಪಾತ್ರದಲ್ಲಿ ನಿರ್ಮಾಣ ಹಂತದಲ್ಲಿ ಚಕ್ ಡ್ಯಾಂ ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನದಿ ಪಾತ್ರ ವ್ಯಾಪ್ತಿಯ ಗ್ರಾಮಗಳ ಜನ-ಜಾನುವಾರುಗಳ ಕುಡಿವ ನೀರು, ಅಂತರ್ಜಲ ವೃದ್ಧಿಗೆ 6 .64 ಕೋಟಿ ರೂ. ವೆಚ್ಚದ ಚೆಕ್ ಡ್ಯಾಂ ಮಂಜೂರಾಗಿದ್ದು, ವಿವಿ ಸಾಗರ ಜಲಾಶಯದಿಂದ ವೇದಾವತಿ ನದಿ ಮೂಲಕ ಚಳ್ಳಕೆರೆಗೆ ನೀರು ಹರಿಸಲಾಗುತ್ತಿದೆ.
ನೀರಿನ ರಭಸಕ್ಕೆ ಎರಡು-ಮೂರು ಕಡೆ ಹೊಡೆದಿದೆ, ಕಳಪೆ ಕಾಮಗಾರಿಯಿಂದ ಚೆಕ್ ಡ್ಯಾಂ ಹಾನಿಗೊಂಡಿದೆ ಎಂಬುದು ಗ್ರಾಮಸ್ಥರ ಆರೋಪ.
ಕಳೆದ ಎರಡು ತಿಂಗಳ ಹಿಂದೆ ಶಾಸಕಿ ಕೆ.ಪೂರ್ಣಿಮಾ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದ್ದರು. ಸ್ವಲ್ಪ ಪ್ರಮಾಣದಲ್ಲಿ ನೀರು ಹರಿಬಿಟ್ಟಿದ್ದಕ್ಕೆ ಚೆಕ್ ಡ್ಯಾಂ ಹೊಡೆದಿದೆ. ಭಾರಿ ಪ್ರಮಾಣದ ನೀರು ಹರಿದರೆ ಚೆಕ್ ಡ್ಯಾಂ ಸಂಪೂರ್ಣವಾಗಿ ಕೊಚ್ಚಿ ಹೋಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಪಂ ಸದಸ್ಯ ಎಸ್.ಆರ್.ವೀರೇಶ್ ಹೇಳಿಕೆ: ಸಾಲುಣಸೆ ಗ್ರಾಮದ ವೇದಾವತಿ ನದಿ ಪಾತ್ರದಲ್ಲಿ ನಿರ್ಮಾಣ ಹಂತದ ಚೆಕ್ ಡ್ಯಾಂ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಲ್ಳಬೇಕು.
ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಭೀಮರಾಜ್ ಹೇಳಿಕೆ: ಸಾಲುಣಸೆ ಗ್ರಾಮದ ಬಳಿ ಚೆಕ್ ಡ್ಯಾಂ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ನದಿ ಮೂಲಕ ನೀರು ಹರಿಸಿದ್ದರ ಪರಿಣಾಮ ನಿರ್ಮಾಣ ಹಂತದ ಚೆಕ್ ಡ್ಯಾಮ್‌ಗೆ ಸ್ವಲ್ಪ ಹಾನಿಯಾಗಿದೆ. ಕಾಮಗಾರಿ ಗಣಮಟ್ಟದಿಂದ ಕೂಡಿದೆ.