

ಹಿರಿಯೂರು: ಅನುದಾನ, ಕಾರ್ಯಕ್ರಮಗಳ ಕುರಿತು ಅಧಿಕಾರಿಗಳಲ ಮಾಹಿತಿ ನೀಡುತ್ತಿಲ್ಲ. ಇದರಿಂದ ಜನಪ್ರತಿನಿಧಿಗಳು ಅಸಹಾಯಕರಾಗಿದ್ದಾರೆ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ್ ಬೇಸರ ವ್ಯಕ್ತಪಡಿಸಿದರು.
ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾಜಿಕ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳು ಸಕಾಲಕ್ಕೆ ಮಾಹಿತಿ ನೀಡದ ಕಾರಣ ಕ್ಷೇತ್ರದ ಜನರಿಗೆ ಸೌಲಭ್ಯ ತಲುಪಿಸುವ ವಿಚಾರದಲ್ಲಿ ಜನಪ್ರತಿನಿಧಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದರು.
ಎಸ್ಸಿ, ಎಸ್ಟಿ, ಒಬಿಸಿ ಜನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿಗೆ ಸರ್ಕಾರದ ಅನುದಾನ ಬಳಕೆ ಆಗದೇ ಹೋದಲ್ಲಿ ಈ ವರ್ಗದ ಸ್ಥಿತಿಗತಿಗಳಲ್ಲಿ ಬದಲಾವಣೆ ಬರಲು ಸಾಧ್ಯವಿಲ್ಲ. ತುಳಿತಕ್ಕೆ ಒಳಗಾದ ಸಮುದಾಯಗಳ ಮೇಲಿನ ಶೋಷಣೆ ನಿಲ್ಲಬೇಕೆಂದರೆ ಈ ವರ್ಗದ ಜನ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಇದಕ್ಕೆ ಅಧಿಕಾರಿಗಳು ಬದ್ಧತೆ ತೋರಿಸಬೇಕಿದೆ ಎಂದರು.
ಮುಂದೆ ನಡೆಯುವ ತಾಪಂ ಸಾಮಾನ್ಯ ಸಭೆಗೆ ಬರುವಾಗ ಎಲ್ಲ ಅಧಿಕಾರಿಗಳು ತಮ್ಮ ಇಲಾಖೆಯ ಸಮಗ್ರ ಮಾಹಿತಿ ತರಬೇಕು ಎಂದು ಸೂಚಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಹನುಮಂತಪ್ಪ, ಸದಸ್ಯರಾದ ಪಿ.ಎಂ.ಕರಿಯಪ್ಪ, ಹನುಮಂತರಾಯ, ವನಜಾಕ್ಷಿ, ವನಿತಾ ದೇವರಾಜ್, ಕೃಷ್ಣಮೂರ್ತಿ ಉಪಸ್ಥಿತರಿದ್ದರು.