ಬಯಲು ಸೀಮೆ ಹಸಿರಾಗಲಿ

HYR thimmappa swamy 07
Published on

ಹಿರಿಯೂರು; ಭದ್ರಾ ಮೇಲ್ದಂಡೆ ಯೋಜನೆಯ ನೀರು ಕಾಲುವೆಗಳ ಮೂಲಕ ಹರಿಸಿ ಬಯಲು ಸೀಮೆಯಲ್ಲಿ ಹಸಿರು ಹೊಮ್ಮಿಸುವ ಜತೆಗೆ ಅಂತರ್ಜಲಮಟ್ಟ ಹೆಚ್ಚಿಸಿದಾಗ ಯೋಜನೆಯ ಪೂರ್ಣ ಫಲ ಜನತೆಗೆ ತಲುಪಿದಂತಾಗುತ್ತದೆ ಎಂದು ಶ್ರೀ ನಂಜಾವಧೂತ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಬೇತೂರು ಪಾಳ್ಯದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಕೋಡಿತಿಮ್ಮಪ್ಪ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ವಿಗ್ರಹ ಪ್ರತಿಷ್ಠಾಪನೆ ಹಾಗೂ ವಿಮಾನ ಕಳಸ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಮಾತನಾಡಿದರು.

ಜನರು ಧರ್ಮ ಹಾಗೂ ಗುರುಗಳ ಮಾರ್ಗದರ್ಶನದಂತೆ ಬದುಕು ಕಟ್ಟಿಕೊಂಡಾಗ ನೆಮ್ಮದಿ ಸಾಧ್ಯ. ಭಾರತದ ಧರ್ಮದ ನೆಲೆಯಲ್ಲಿ ರೂಪುಗೊಂಡ ನಾಡು. ಸಂತರು ಸಹ ಧರ್ಮ, ಶಾಂತಿ, ಶ್ರಮದ ನೆಲೆಯಲ್ಲಿ ಬದುಕು ಕಟ್ಟಿಕೊಳ್ಳಬೇಕೆಂಬ ಸಂದೇಶ ಸಾರಿರುವುದೇ ಇದಕ್ಕೆ ನಿದರ್ಶನ ಎಂದರು.

ತಿರುಮಲ ತಿರುಪತಿ ದೇವಸ್ಥಾನದ ಆಗಮ ಪಂಡಿತರಾದ ಎಲ್.ವೆಂಕಟೇಶನ್ ಮತ್ತು ತಂಡದವರು ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಜಾಗಟೆ ಸ್ಮರಣೆ: ಶ್ರೀಸ್ವಾಮಿ ಕಲ್ಯಾಣೋತ್ಸವ ಬೆಳಗ್ಗೆ 10ರಿಂದ 12ರ ವರೆಗೆ ವಿಜೃಂಭಣೆಯಿಂದ ಜರುಗಿತು. ಶ್ರೀ ಕೋಡಿ ತಿಮ್ಮಪ್ಪ ಸ್ವಾಮಿಗೆ ಭಕ್ತರಿಂದ ಮಹಾಕುಂಭಾಭಿಷೇಕ ಏರ್ಪಡಿಸಲಾಗಿತ್ತು. 500 ಮುದ್ರೆ ದಾಸಯ್ಯಗಳಿಂದ ಜಾಗಟೆ, ಶಂಖನಾದಗಳಿಂದ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಶ್ರೀಗೋವಿಂದ ನಾಮಸ್ಮರಣೆ ನಡೆಯಿತು.

ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ಜಿಪಂ ಮಾಜಿ ಅಧ್ಯಕ್ಷ ಬಿ.ಎಸ್.ರಘುನಾಥ್, ಡಿ.ಯಶೋಧರ್, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬಿ.ಕೆ.ಸೀತಾರಾಮಯ್ಯ, ಉಪಾಧ್ಯಕ್ಷ ಜೆ.ರಾಜು, ಡಾ.ಮಂಜುನಾಥ್, ಡಾ.ಮಾಲಿನಿ, ಡಾ.ವನಮಾಲಾ, ಡಾ.ಎಂ.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net