

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ವಿವಿ ಸಾಗರ ಜಲಾಶಯದಿಂದ ಚಳ್ಳಕೆರೆ-ಮೊಳಕಾಲ್ಮೂರು ತಾಲೂಕಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ನೀರು ಹರಿಸಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ.
ವಿವಿ ಸಾಗರದಿಂದ ಹರಿದ ನೀರು ಹಿರಿಯೂರು ತಾಲೂಕಿನ 6, ಚಳ್ಳಕೆರೆಯ 5 ಬ್ಯಾರೇಜ್ ತುಂಬಿ ಈಗಾಗಲೇ ಮೊಳಕಾಲ್ಮೂರು ತಾಲೂಕಿನಲ್ಲಿ 18 ಕಿ.ಮೀ ದೂರ ಕ್ರಮಿಸಿದೆ.
ಇದೀಗ ಸರ್ಕಾರ-ಜನಪ್ರತಿನಿಧಿಗಳ ಅವೈಜ್ಞಾನಿಕ ಕ್ರಮದಿಂದ ನೀರು ಆಂಧ್ರದ ಗಡಿ ತಲುಪಲು ಕ್ಷಣಗಣನೆ ಆರಂಭವಾಗಿದೆ ಎಂದು ರೈತರು ದೂರಿದ್ದಾರೆ.
ಜಲಾಶಯದಿಂದ ಎಷ್ಟು ನೀರು ಬಿಡಲಾಗುತ್ತಿದೆ ಎಂಬ ಮಾಹಿತಿ ನೀಡಲು ಹಿಂದೇಟು ಹಾಕಲಾಗುತ್ತಿದೆ ಎಂದು ರೈತರು ದೂರಿದರೆ ನಮ್ಮನ್ನೇನೂ ಕೇಳಬೇಡಿ, ಸರ್ಕಾರ ಹೇಳಿದಂತೆ ಕೇಳುವುದು ನಮ್ಮ ಕರ್ತವ್ಯ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಗೇಜ್ ಅಳವಡಿಸಿಲ್ಲ: ಜಲಾಶಯದಿಂದ ಹರಿವ ನೀರಿನ ಲೆಕ್ಕ ಹಾಕಲು ಗೇಜ್ ಅಳವಡಿಸಿಲ್ಲ ಎಂಬ ದೂರಿದೆ. ಏ.23ರಿಂದ ವೇದಾವತಿ ನದಿ ಪಾತ್ರಕ್ಕೆ 0.25 ಟಿಎಂಸಿ ಅಡಿ ನೀರು ಬಿಟ್ಟರೂ ಚಳ್ಳಕೆರೆ ಗಡಿ ಪ್ರವೇಶಿಸದ ಕಾರಣ ಅಲ್ಲಿನ ಶಾಸಕ ಟಿ.ರಘುಮೂರ್ತಿ ಮತ್ತೆ ನೀರು ಹರಿಸಲು ಸರ್ಕಾರದಿಂದ ಆದೇಶ ಮಾಡಿಸಿದ್ದರು.
ಈ ಮಧ್ಯೆ ಸಚಿವ ಶ್ರೀರಾಮುಲು ಒತ್ತಡ ಹಾಕಿ ಮೊಳಕಾಲ್ಮೂರಿಗೆ 0.25 ಟಿಎಂಸಿ ಅಡಿ ನೀರು ಒಯ್ದರು. ಅಧಿಕಾರಿಗಳ ಪ್ರಕಾರ ಈಗಾಗಲೇ ಜಲಾಶಯದಿಂದ 1.5 ಟಿಎಂಸಿ ಅಡಿ ಹರಿದಿದೆ. ಇನ್ನು 10-12 ದಿನ ಹರಿಸುವ ಸಾಧ್ಯತೆಗಳಿವೆ.
ಭದ್ರಾ ಮೇಲ್ದಂಡೆ ಯೋಜನೆ ಕಾಲ ಮಿತಿಯಲ್ಲಿ ಪೂರ್ಣಗೊಳ್ಳದಿದ್ದರೆ ಹಾಗೂ ಮಳೆ ಕೈಕೊಟ್ಟರೆ ಜಲಾಶಯದ ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಲಿದೆ ಎನ್ನುವ ಆತಂಕ ರೈತರಲ್ಲಿ ಮೂಡಿದೆ.
ಧ್ವನಿ ಎತ್ತದ ಕಾಂಗ್ರೆಸ್-ಜೆಡಿಎಸ್: ತಾಲೂಕಿನ ಹಿತ ಕಾಯುವಲ್ಲಿ ಕಾಂಗ್ರೆಸ್-ಜೆಡಿಎಸ್ ಸಂಪೂರ್ಣವಾಗಿ ವಿಫಲವಾಗಿವೆ. ಶಾಸಕಿ ಪೂರ್ಣಿಮಾ ಮಾತ್ರ ರೈತರ ಜತೆಗೂಡಿ ಹೆಚ್ಚುವರಿ ನೀರು ಹರಿಸುವುದನ್ನು ಪ್ರಬಲವಾಗಿ ವಿರೋಧಿಸಿ ಸರ್ಕಾರಕ್ಕೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದು ಬಿಟ್ಟರೆ, ಇತರರು ಧ್ವನಿ ಎತ್ತಿಲ್ಲ ಎಂಬುದು ಕೆಲವರ ಆರೋಪ.
ಇಂದು ಧರಣಿ: ಚಳ್ಳಕೆರೆ-ಮೊಳಕಾಲ್ಮೂರು ತಾಲೂಕಿಗೆ ಹೆಚ್ಚುವರಿ ನೀರು ಹರಿಸುತ್ತಿರುವುದು ಖಂಡಿಸಿ ರೈತ ಸಂಘದ ನೇತೃತ್ವದಲ್ಲಿ ಮೇ 21 ಗುರುವಾರ ನೀರಾವರಿ ಕಚೇರಿ ಬಳಿ ಧರಣಿ ನಡೆಸಲು ರೈತರು ಸಜ್ಜಾಗಿದ್ದಾರೆ.
ಪತ್ರ ಬರೆದಿದ್ದ ಶಾಸಕಿ: ಹೆಚ್ಚುವರಿ ನೀರು ಹರಿಸಲಾಗುತ್ತಿದೆ ಎಂದು ಶಾಸಕಿ ಕೆ.ಪೂರ್ಣಿಮಾ ನೇತೃತ್ವದಲ್ಲಿ ರೈತರು ಜಲಾಶಯಕ್ಕೆ ಮುತ್ತಿಗೆ ಹಾಕಿದ್ದರು. ಈ ವೇಳೆ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.
ಅಧಿಕಾರಿ ಅಮಾನತು ಸಲ್ಲ: ಅಧಿಕಾರಿಗಳು ನೀರಾವರಿ ಸಚಿವರ ಮೌಖಿಕ ಆದೇಶ ಪಾಲಿಸಿಲ್ಲ. ಸ್ಥಳೀಯ ಶಾಸಕರ ಆಣತಿಯಂತೆ ನಡೆದರೆಂಬ ಕಾರಣಕ್ಕೆ ನೀರಾವರಿ ಇಲಾಖೆ ಅಧಿಕಾರಿಯೊಬ್ಬರನ್ನು ಅಮಾನತು ಪಡಿಸಿದ್ದಾರೆಂದು ರೈತರು ದೂರಿದ್ದಾರೆ.