

ಹಿರಿಯೂರು: ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಗೂ, ಹಿರಿಯೂರಿನಲ್ಲಿ ಹೋಂ ಕ್ವಾರಂಟೈನಲ್ಲಿದ 9 ಜನರಿಗೂ ಯಾವುದೇ ಸಂಬಂಧವಿಲ್ಲ ಎಂದು ಟಿಎಚ್‌ಒ ವೆಂಕಟೇಶ್ ಹೇಳಿದರು.
ನಗರದ ತನ್ಯಾಸಿ ಗೌಂಡರ್ ಕಲ್ಯಾಣ ಮಂಟಪದಲ್ಲಿ ಬುಧವಾರ ಫ್ಲೂ ಚಿಕಿತ್ಸಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ಸೌದಿ ಅರೇಬಿಯಾ ದೇಶದಿಂದ ಆಗಮಿಸಿದ 8 ಮಂದಿ ಹಾಗೂ ಒಬ್ಬ ಕಾರು ಚಾಲಕನನ್ನು ಹೋಂ ಕ್ವಾರಂಟೈನಲ್ಲಿರಿಸಿ ಪ್ರತಿನಿತ್ಯ ತೀವ್ರ ನಿಗಾ ವಹಿಸಲಾಗಿದ್ದು, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಇವರನ್ನು ಚಿತ್ರದುರ್ಗದ ಹೋಂ ಕ್ವಾರಂಟೈನ್‌ಗೆ ಶಿಫ್ಟ್ ಮಾಡಲಾಗಿದೆ ಎಂದರು.
ಇವರ ರಕ್ತದ ಮಾದರಿ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ದೆಹಲಿ ಧಾರ್ಮಿಕ ಸಭೆಯಲ್ಲಿ ಇವರು ಭಾಗವಹಿಸಿಲ್ಲ. ಸೌದಿ ಅರೇಬಿಯಾ ದೇಶದಿಂದ ಮುಂಬೈ-ಬೆಂಗಳೂರು ಮಾರ್ಗವಾಗಿ ಹಿರಿಯೂರಿಗೆ ಆಗಮಿಸಿರುವ ಬಗ್ಗೆ ಏರ್ ಟಿಕೆಟ್ ಪರಿಶೀಲಿಸಿ ಖಚಿಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಸತ್ಯನಾರಾಯಣ, ಆರೋಗ್ಯ ರಕ್ಷ ಸಮಿತಿ ಸದಸ್ಯ ಜಿ.ದಾದಾಪೀರ್, ತಾಪಂ ಇಒ ಹನುಮಂತಪ್ಪ, ಸಮಾಜ ಕಲ್ಯಾಣಾಧಿಕಾರಿ ಕೃಷ್ಣಮೂರ್ತಿ ಇತರರಿದ್ದರು.