

ಹಿರಿಯೂರು: ಸರ್ಕಾರದ ಮಾರ್ಗಸೂಚಿ ಪಾಲಿಸುವಾಗ ಪೊಲೀಸರು ಮಾನವೀಯತೆ ನೋಡಬೇಕೆ? ಕಾನೂನು ಪಾಲಿಸಬೇಕೆ ಎಂಬ ವಿಚಾರದಲ್ಲಿ ಹಲವು ಬಾರಿ ಧರ್ಮ ಸಂಕಟಕ್ಕೆ ಒಳಗಾಗಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಹೇಳಿದರು.
ನಗರದ ಗ್ರಾಮಾಂತರ ಠಾಣೆ ಆವರಣದಲ್ಲಿ ಶನಿವಾರ ಕರೊನಾ ಸೇನಾನಿಗಳಾಗಿ ಕಾರ್ಯನಿರ್ವಹಿಸಿದ ಪೊಲೀಸರಿಗೆ ಹಮ್ಮಿಕೊಂಡಿದ್ದ ಗೌರವ ಸಮರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯ ಅತ್ಯಂತ ಪ್ರಮುಖ ಚೆಕ್‌ಪೋಸ್ಟ್. ಬೆಂಗಳೂರು-ಉತ್ತರ ಕರ್ನಾಟಕದ ಕಡೆ ಹೋಗುವವರಿಗೆ ಇದೊಂದೆ ಮಾರ್ಗ. ಲಾಕ್‌ಡೌನ್ ಮೊದಲ ಹಂತದಲ್ಲಿ ಜಿಲ್ಲೆಯ ಒಳಗೆ ಯಾರನ್ನೂ ಬಿಡುವಂತಿರಲಿಲ್ಲ ಎಂದರು.
ಗೂಡ್ಸ್ ವಾಹನಗಳು, ಮೆಡಿಕಲ್ ಎಮರ್ಜೆನ್ಸಿ ಪ್ರಕರಣಗಳನ್ನು ಬಿಡುವಂತೆ ಸೂಚನೆ ಬಂದಿತು. ಎಷ್ಟೋ ಜನ ಮೆಡಿಕಲ್ ಎಮರ್ಜೆನ್ಸಿ ವಿನಾಯಿತಿ ದುರ್ಬಳಕೆ ಮಾಡಿಕೊಂಡರು. ಪಾಸ್ ಇದ್ದವರಿಗೆ ಬಿಡಬೇಕೆಂಬ ಸೂಚನೆ ಬಂದಾಗ, ಗೊಂದಲ ಉಂಟಾಗಿತ್ತು ಎಂದು ತಿಳಿಸಿದರು.
ಪ್ರಸ್ತುತ ಜಿಲ್ಲೆಯಲ್ಲಿ ಯಾವುದೇ ಹೊಸ ಕೋವಿಡ್ ಪ್ರಕರಣಗಳು ಇಲ್ಲ ಎಂಬುದು ಸಮಾಧಾನ ಸಂಗತಿ. ಇದಕ್ಕೆ ಆರೋಗ್ಯ, ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕೊಡುಗೆ ಸಾಕಷ್ಟಿದೆ. ಜಿಲ್ಲೆಯಲ್ಲಿ ಈ ಮಟ್ಟದ ನಿಯಂತ್ರಣ ಬರಲು ಪೊಲೀಸರು ಶ್ರಮಪಟ್ಟಿರುವುದು ನನಗೆ ಹೆಮ್ಮೆ ಎನಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ, ತಹಸೀಲ್ದಾರ್ ಸತ್ಯನಾರಾಯಣ, ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮಾತನಾಡಿದರು. ಪಿಎಸ್‌ಐಗಳಾದ ಪರಮೇಶ್, ಎ.ಮಂಜುನಾಥ್, ಅನಸೂಯಮ್ಮ, ಶಶಿಕಲಾ ಉಪಸ್ಥಿತರಿದ್ದರು.
ಸಿಪಿಐ ರಾಘವೇಂದ್ರ ಸ್ವಾಗತಿಸಿದರು. ಡಿವೈಎಸ್ಪಿ ರೋಷನ್ ಜಮೀರ್ ವಂದಿಸಿದರು. ಚಂದ್ರಶೇಖರ್ ನಿರೂಪಿಸಿದರು.