ವೇದಾವತಿ ಜತೆಗೂಡಿ ಹೆಜ್ಜೆ ಹಾಕಿದ ಭದ್ರೆ

HYR vv 06
Published on

ಹಿರಿಯೂರು: ವೇದಾವತಿ ನದಿ ನೀರು ಜತೆಗೂಡಿ ಶುಕ್ರವಾರ ಬಯಲು ಸೀಮೆ ಸ್ಪರ್ಶಿಸಿದ ಭದ್ರೆಯನ್ನು ಕಣ್ತುಬಿಕೊಂಡ ಅನ್ನದಾತರ ಮೊಗದಲ್ಲಿ ಹರ್ಷದ ಹೊಳೆ ಹರಿಯಿತು.

ದಶಕದಿಂದ ಭದ್ರೆಗಾಗಿ ಅವಿರತ ಹೋರಾಟ ನಡೆಸಿದ್ದ ಬಯಲು ಸೀಮೆ ರೈತರಲ್ಲಿ ಹೊಸ ಚೈತನ್ಯ ಮೂಡಿಸಿದ್ದು, ವಿವಿ ಸಾಗರ ಜಲಾಶಯದ ಹೋಮ-ಹವನ, ಗಂಗಾಪೂಜೆ ನೆರವೇರಿಸಿದ ನಂತರ ಜಿಲ್ಲೆಯ ಮಠಾಧೀಶರು-ಜನಪ್ರತಿನಿದಿಗಳು ಜಲಾಶಯದ ತೂಬು ಎತ್ತಲು ಚಾಲನೆ ನೀಡಿದರು. ಸ್ಥಳದಲ್ಲಿ ಜಮಾಯಿಸಿದ್ದ ಸಹಸ್ರಾರು ರೈತರು ತೂಬಿನಿಂದ ನೀರು ಹರಿಯುತ್ತಿದ್ದಂತೆ ಕುಣಿದು ಕುಪ್ಪಳಿಸಿದರು.

ವೇದಾವತಿ ನದಿ ಜತೆಗೂಡಿದ ಭದ್ರೆ ತಾಲೂಕಿನ ಅಚ್ಚುಕಟ್ಟು ಪ್ರದೇಶದ ಕಡೆ ಮೊದಲ ಬಾರಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು, ನೀರನ್ನು ಸ್ಪರ್ಶಿಸಿದ ರೈತರು ಧನ್ಯತಾಭಾವ ವ್ಯಕ್ತಪಡಿಸಿದರು.

ವಿವಿಧ ಮಠಾಧೀಶರನ್ನು ಪೂರ್ಣ ಕುಂಭದೊಂದಿಗೆ ಜಲಾಶಯದ ಬಳಿ ಕರೆತಂದು ಜಲಾಶಯಕ್ಕೆ ಬಾಗಿನ ಅರ್ಪಿಸಿ ಗಂಗಾ ಪೂಜೆ ನೆರವೇರಿಸಲಾಯಿತು. ಈ ವೇಳೆ ಮಠಾಧೀಶರು ಮೀನಿನ ಮರಿಗಳನ್ನು ಜಲಾಶಯಕ್ಕೆ ಬಿಟ್ಟರು.

ಬಳಿಕೆ ಮಾರಮ್ಮ ದೇಗುಲದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಜರುಗಿತು. ಬ್ರಹ್ಮನಂದ ಸ್ವಾಮೀಜಿ ಶ್ರೀ, ಮಾದಾರ ಚನ್ನಯ್ಯ ಶ್ರೀ, ಮಾಜಿ ಶಾಸಕ ಮಸ್ಕಲ್ ರಾಮಯ್ಯ, ಬಿಜೆಪಿ ಮುಖಂಡ ಕೆ.ಎಸ್.ನವೀನ್, ದ್ಯಾಮಣ್ಣ, ಜಿಪಂ ಸದಸ್ಯೆ ರಾಜೇಶ್ವರಿ, ರೈತಮುಖಂಡರಾದ ಕಸವನಹಳ್ಳಿ ರಮೇಶ್, ಕೆ.ಟಿ.ತಿಪ್ಪೇಸ್ವಾಮಿ, ಸಿದ್ದರಾಮಣ್ಣ, ಕೆ.ಸಿ.ಹೊರಕೇರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್, ತಾಪಂ ಸದ್ಯರಾದ ಯಶವಂತ್, ಜಯರಾಮಯ್ಯ, ಗ್ರಾಪಂ ಅಧ್ಯಕ್ಷ ವೆಂಕಟೇಶ್, ತಹಸೀಲ್ದಾರ್ ಸತ್ಯನಾರಾಯಣ ಇತರರಿದ್ದರು.

ಹೋರಾಟದ ಫಲಕ್ಕೆ ಭದ್ರೆ ಆಗಮನ: ಜಿಲ್ಲೆಯ ಮಠಾಧೀಶರು-ರೈತರ ಹೋರಾಟದ ಫಲ, ನಿಸರ್ಗದ ಕರುಣೆಯಿಂದ ವಿವಿ ಸಾಗರಕ್ಕೆ ನೀರು ಹರಿದಿದ್ದು, ಚಿತ್ರದುರ್ಗಕ್ಕೆ ಕುಡಿವ ನೀರು ಮಾತ್ರ ಸಿಗುತ್ತಿದೆ. ಕೃಷಿ ಚಟುವಟಿಕೆಗೆ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಒತ್ತಾಯಿಸಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಶ್ರೀ ಮುರುಘಾ ಶರಣರು ಹೇಳಿದರು.

ಭದ್ರಾ ಕಾಮಗಾರಿಗೆ ವೇಗ: ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಿ ಜೂನ್ ತಿಂಗಳ ನಂತರ ನಿರಂತರವಾಗಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲಾಗುವುದು ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು. ನೀರಾವರಿ ಸೌಲಭ್ಯವಿಲ್ಲದೆ ಅನ್ನದಾತ ಬೀದಿಗೆ ಬಿದ್ದಿದ್ದು, ಗ್ರಾಮೀಣ ಭಾಗದ ಶೇ.60ರಷ್ಟು ರೈತ ಕುಟುಂಬಗಳು ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ದುಡಿವ ಪರಿಸ್ಥಿತಿ ನಿಮಾಣವಾಗಿದೆ ಎಂದು ಬೇಸರಿಸಿದರು.

ಕೆಆರ್‌ಎಸ್ ಮಾದರಿ ಅಭಿವೃದ್ಧಿ: ವಿವಿ ಸಾಗರ ಜಲಾಶಯದ ಬಳಿ ಅಗತ್ಯ ಮೂಲ ಸೌಕರ್ಯ ಕಲ್ಪಸಿ, ಕೆಆರ್‌ಎಸ್ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕಿ ಕೆ.ಪೂರ್ಣಿಮಾ ಹೇಳಿದರು. ಎಡ-ಬಲದಂಡೆ ನಾಲೆ ಅಭಿವೃದ್ಧಿಗೆ 285 ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಿನಿ ವಿಧಾನಸೌಧ, ಸಾರಿಗೆ ಡಿಪೋ, 125 ಕೋಟಿ ರೂ. ವೆಚ್ಚದಲ್ಲಿ ಧರ್ಮಪುರ, ಕೋಡಿಹಳ್ಳಿ, ಇಕ್ಕನೂರು ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಮೊದಲ ಬಾರಿಗೆ ಹಗಲು ವೇಳೆ ನೀರು: ವಿವಿ ಸಾಗರ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಲುವೆಗಳಿಗೆ ನೀರನ್ನು ಬೆಳಗ್ಗೆ ವೇಳೆ ಬಿಟ್ಟಿದ್ದು ತೀವ್ರ ಚರ್ಚೆಗೆ ಗ್ರಾಸವಾಯಿತು. ರಾತ್ರಿ ವೇಳೆ ತೂಬು ಎತ್ತುತ್ತಿದ್ದ ಇಲಾಖೆ ಅಧಿಕಾರಿಗಳು, ಶುಕ್ರವಾರ ಹಗಲಿನಲ್ಲಿ ನಾಲೆಗಳಿಗೆ ನೀರು ಹರಿಸಿದರು.

ಬಿಜೆಪಿ ಮುಖಂಡ ಡಿ.ಟಿ.ಶ್ರೀನಿವಾಸ್ ಹೇಳಿಕೆ: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಚಿವ ಸಿ.ಟಿ.ರವಿ ಸ್ಪಂದಿಸಿದ್ದು, ವಿವಿ ಸಾಗರ ಜಲಾಶಯದ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಸ್ಥಾಪಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net