ವಿವಿ ಸಾಗರಕ್ಕೆ ಬೇಕು 10 ಟಿಎಂಸಿ ಅಡಿ ನೀರು

HYR GHT 28
Published on

ಹಿರಿಯೂರು: ಬಯಲು ಸೀಮೆಯ ಜೀವನಾಡಿ ವಿವಿ ಸಾಗರ ಜಲಾಶಯಕ್ಕೆ 10 ಟಿಎಂಸಿ ಅಡಿ ನೀರು ತುಂಬಿಸಲು ಪಕ್ಷಾತೀತವಾಗಿ ಎಲ್ಲರು ಒಗ್ಗೂಡಿ ಸರ್ಕಾರಕ್ಕೆ ಮನವರಿಕೆ ಮಾಡುವುದು ಅನಿವಾರ್ಯ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ಪ್ರವಾಸಿ ಮಂದಿರ ಸಭಾಂಗಣದಲ್ಲಿ ಬುಧವಾರ ವಿವಿ ಸಾಗರ ಮತ್ತು ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರ ರೈತರ ಹಿತ ರಕ್ಷಣಾ ಸಮಿತಿ ಉದ್ಘಾಟಿಸಿ ಮಾತನಾಡಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಸತತ ಬರ, ಮಳೆ ಕೊರತೆಯಿಂದ ಅಂತರ್ಜಲ ಪಾತಾಳ ಸೇರಿದೆ. ಜನ-ಜಾನುವಾರುಗಳು ಹನಿ ನೀರಿಗೂ ಪರಿತಪಿಸುವಂತಾಗಿದೆ. ಪ್ರತಿ ಸರ್ಕಾರದಲ್ಲಿ ನೀರಾವರಿ ಸಚಿವರಾದವರು ಮಧ್ಯ ಕರ್ನಾಟಕದ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ಗಮನಹರಿಸಿಲ್ಲ ಎಂದು ದೂರಿದರು.

ಗೊಲ್ಲ ಸಂಘದ ರಾಜ್ಯ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಮಾತನಾಡಿ, 2008ರಲ್ಲಿ ಬಿಎಸ್‌ವೈ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ವಿವಿ ಸಾಗರಕ್ಕೆ 5 ಟಿಎಂಸಿ ಅಡಿ ನೀರು ನಿಗದಿಪಡಿಸಲಾಗಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 3 ಟಿಎಂಸಿ ನೀರು ಕಡಿತಗೊಳಿಸಿ ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ. ಕೇವಲ 2 ಟಿಎಂಸಿ ಅಡಿ ನೀರಿನಲ್ಲಿ ಕುಡಿವ ನೀರು, ಕೃಷಿಗೆ ನೀರು ಪೂರೈಕೆ ಮಾಡುವುದು ಕಷ್ಟ ಸಾಧ್ಯ ಎಂದು ತಿಳಿಸಿದರು.

ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್, ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ, ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಸಿದ್ದರಾಮಣ್ಣ, ಸುರೇಶ್, ನಾರಾಯಣಚಾರ್, ವಿಶ್ವನಾಥ್ ಇತರರಿದ್ದರು.

ತಾರತಮ್ಯ ಸಲ್ಲದು: ಜನರಿಗೆ ಕುಡಿವ ನೀರು ಕೊಡುವ ವಿಚಾರದಲ್ಲಿ ತಾರತಮ್ಯ ಸಲ್ಲದು. ತುಂಗಾಭದ್ರ ಹಿನ್ನೀರು ಯೋಜನೆಯಲ್ಲಿ ಧರ್ಮಪುರ ಹೋಬಳಿಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸುವ ಅವಕಾಶವಿದ್ದರೂ ರಾಜಕೀಯ ಕಾರಣಕ್ಕೆ ಯೋಜನೆಯಲ್ಲಿ ಸೇರ್ಪಡೆ ಮಾಡಿಲ್ಲದಿರುವುದು ಬೇಸರ ತರಿಸಿದೆ. ಅನ್ಯಾಯ ಸರಿಪಡಿಸಿ ಎಲ್ಲರಿಗೂ ಶುದ್ಧ ಕುಡಿವ ನೀರು ಸಿಗುವಂತೆ ಯೋಜನೆ ರೂಪಿಸಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಶಾಸಕ ತಿಪ್ಪಾರೆಡ್ಡಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net