

ಹಿರಿಯೂರು: ವಿದ್ಯಾರ್ಥಿಗಳು ಶಿಕ್ಷಕರನ್ನು ಪ್ರಶ್ನಿಸುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅಕ್ಷರ ದಾಸೋಹ ಅಧಿಕಾರಿ ಎಲ್.ನಾಗರಾಜಾಚಾರ್ ಹೇಳಿದರು.
ತಾಲೂಕಿನ ಬಿ.ಶಿವಪುರ ಸರ್ಕಾರಿ ಪ್ರಾಥಮಿಕ ಶಾಲೆಗೆ ಶನಿವಾರ ಭೇಟಿ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಅಕ್ಷರ ದಾಸೋಹ ಯೋಜನೆ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದರು.
ವಿದ್ಯಾರ್ಥಿಗಳು ಸದಾ ಪ್ರಶ್ನಿಸುವಂತೆ ಶಿಕ್ಷಕರು ಪ್ರೇರೆಪಿಸಬೇಕು. ಸೃಜನಶೀಲತೆ ಹೆಚ್ಚಬೇಕಾದರೆ ಕುತೂಹಲ ಹುಟ್ಟಿಸಬೇಕು, ಅದು ಮಕ್ಕಳ ಉಜ್ವಲ ಭವಿಷ್ಯಕ್ಕೆ ದಾರಿ ದೀಪವಾಗುತ್ತದೆ ಎಂದು ತಿಳಿಸಿದರು.
ಆಧುನಿಕ ಯುಗದಲ್ಲಿ ವಿದ್ಯೆಯೇ ನಿಜವಾದ ಸಂಪತ್ತು. ಇದನ್ನು ಪೋಷಕರು ಅರಿಯಬೇಕು. ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಶಿಕ್ಷಕರು ನಿತ್ಯ ಅಧ್ಯಯನ ನಡೆಸಬೇಕು, ಮಕ್ಕಳಿಗೆ ಹೊಸ ತನ ಕಲಿಸಬೇಕು ಎಂದರು.
ಶಾಲೆಯ ಮೂಲ ಸೌಲಭ್ಯ, ಅಕ್ಷರ ದಾಸೋಹ ನಿರ್ವಹಣೆ ಬಗ್ಗೆ ಪರಿಶೀಲಿಸಿ, ಸ್ವಚ್ಛತೆ ಕಾಪಾಡಿಕೊಂಡು ಮಕ್ಕಳಿಗೆ ಶುಚಿ-ರುಚಿಯಾದ ಆಹಾರ ತಯಾರಿಕೆಗೆ ಸಿಬ್ಬಂದಿ ಶ್ರಮಿಸಬೇಕು ಎಂದು ಸೂಚಿಸಿದರು.
ಮಕ್ಕಳು ತಯಾರಿಸಿದ ಬೆಂಕಿ ರಹಿತ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ಪಡೆದರು. ಮುಖ್ಯಶಿಕ್ಷಕಿ ನಾಗರತ್ನಾ, ಶಿಕ್ಷಕಿ ಶಿವಕುಮಾರಿ, ಸಿಆರ್‌ಪಿ ಜಯಪ್ರಕಾಶ್, ಚನ್ನಕೇಶವ, ಶಶಿಧರ್ ಇತರರಿದ್ದರು.