ತಾಲೂಕನ್ನು ಬರಪಟ್ಟಿಯಿಂದ ಕೈಬಿಡಲು ಕಾರಣವೇನು?

HYR BARA 06 (3)
Published on

ಹಿರಿಯೂರು: ತಾಲೂಕನ್ನು ಬರಪಟ್ಟಿಯಿಂದ ಕೈಬಿಟ್ಟಿರುವುದರಿಂದ ರೈತರಲ್ಲಿ ಅಸಮಾಧಾನವಿದ್ದು, ಇದಕ್ಕೆ ಪ್ರಮುಖ ಕಾರಣಗಳೇನು ಎಂದು ಶಾಸಕಿ ಕೆ. ಪೂರ್ಣಿಮಾ ಅಧಿಕಾರಿಗಳನ್ನು ಪ್ರಶ್ನಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಹಿರಿಯೂರು ತಾಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟ ವಿಚಾರವಾಗಿ ರೈತ ಮುಖಂಡರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯ ಚಳ್ಳಕೆರೆ, ಚಿತ್ರದುರ್ಗ ಹಾಗೂ ಮೊಳಕಾಲ್ಮೂರು ಬರ ಪಟ್ಟಿಯಲ್ಲಿವೆ. ಆದರೆ ಹಿರಿಯೂರು ತಾಲೂಕನ್ನು ಮಾತ್ರ ಕೈಬಿಡಲಾಗಿದೆ. ನೀವು ಸರ್ಕಾರಕ್ಕೆ ಕಳುಹಿಸಿದ ವರದಿಯಾದರೂ ಏನು ಎಂಬುದನ್ನು ರೈತರಿಗೆ ತಿಳಿಸಿ ಎಂದರು.

ಕೃಷಿ ಇಲಾಖೆ ಜಂಟಿ ಸಹಾಯಕ ನಿರ್ದೇಶಕ ಸದಾಶಿವ ಮಾತನಾಡಿ, ಬರ ತಾಲೂಕು ಘೋಷಣೆಗೆ ಜೂನ್-ಸೆಪ್ಟೆಂಬರ್ ತಿಂಗಳುಗಳ ವರೆಗಿನ ಮಳೆಯ ಪ್ರಮಾಣ ಪರಿಗಣಿಸಲಾಗುತ್ತದೆ. ಇಲಾಖೆ ಕೊಡುವ ವರದಿ ಜತೆ ಸೆಟಲೈಟ್ ಮೂಲಕವು ಅವರು ಮಾಹಿತಿ ಪಡೆಯುತ್ತಾರೆ. ಅದರಂತೆ ತಾಲೂಕಿನಲ್ಲಿ ಜೂನ್‌ನಲ್ಲಿ 87.75ಮಿ.ಮೀ ಹಾಗೂ ಜುಲೈನಲ್ಲಿ 38 ಮಿ.ಮೀ ಮಳೆಯಾಗಿದೆ. ಅಲ್ಲದೆ ಆಗಸ್ಟ್‌ನಲ್ಲಿ ಶೇ.43.92ರಷ್ಟು, ಸೆಪ್ಟಂಬರ್‌ನಲ್ಲಿ ಶೇ.61.53 ರಷ್ಟು ಮಳೆಯಾದ ಕಾರಣ ತಾಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟಿರಬಹುದು ಎಂದು ತಿಳಿಸಿದರು.

ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ ಮಾತನಾಡಿ, ಚಿತ್ರದುರ್ಗ, ಚಳ್ಳಕೆರೆ ತಾಲೂಕುಗಳಲ್ಲಿ ಹಿರಿಯೂರಿಗಿಂತ ಹೆಚ್ಚು ಮಳೆ ಹಾಗೂ ಬಿತ್ತನೆ ಆಗಿದೆ. ಆದರೂ ಅವುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದೆ. ನಮ್ಮ ತಾಲೂಕು ಕೈಬಿಡಲು ಅಧಿಕಾರಿಗಳ ಲೋಪವೇ ಕಾರಣ ಎಂದು ದೂರಿದರು.

ಸಹಾಯಕ ಕೃಷಿ ಅಧಿಕಾರಿ ಉಷಾರಾಣಿ ಮಾತನಾಡಿ, ತಾಲೂಕಿನ 2132 ರೈತರಿಗೆ ಮುಂಗಾರು ಹಂಗಾಮಿಗೆ 3.64 ಕೋಟಿ ರೂ., ಹಿಂಗಾರು ಹಂಗಾಮಿಗೆ 1738 ರೈತರಿಗೆ 4.58 ಕೋಟಿ ರೂ. ಬೆಳೆವಿಮೆ ಹಣ ಬಂದಿದೆ. ಈ ಪೈಕಿ 173 ರೈತರ ಬ್ಯಾಂಕ್ ಖಾತೆ ಸರಿಯಿಲ್ಲದೆ ಪರಿಹಾರ ಬಂದಿಲ್ಲ ಎಂದು ತಿಳಿಸಿದರು.

ಶಾಸಕಿ ಕೆ. ಪೂರ್ಣಿಮಾ ಮಾತನಾಡಿ, ಇನ್ನೆರಡು ದಿನದಲ್ಲಿ 2019ರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಆದ ಮಳೆ ಹಾಗೂ ಬೆಳೆ ಬಿತ್ತನೆ ಪ್ರಮಾಣದ ಮಾಹಿತಿ ನೀಡಬೇಕು. ನಾನು ಅದನ್ನು ಸಿಎಂ ಸಲ್ಲಿಸಿ ತಾಲೂಕಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಕೋರುತ್ತೇನೆ ಎಂದು ಭರವಸೆ ನೀಡಿದರು.

ಕಡಲೆ ಖರೀದಿ ಕೇಂದ್ರದ ಆದೇಶ ಮುಂದಿನ ನಾಲ್ಕು ದಿನದಲ್ಲಿ ಹೊರಬೀಳಲಿದ್ದು, ಬೆಳೆಯನ್ನು ತಕ್ಷಣ ಮಾರಾಟ ಮಾಡಬೇಡಿ ಎಂದು ರೈತರಲ್ಲಿ ಮನವಿ ಮಾಡಿದರು.

ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ಸಿ. ಸಿದ್ದರಾಮಣ್ಣ, ಕೆ.ಸಿ. ಹೊರಕೇರಪ್ಪ, ಬಬ್ಬೂರು ಸುರೇಶ್, ತಹಸೀಲ್ದಾರ್ ಸತ್ಯನಾರಾಯಣ, ತೋಟಗಾರಿಕೆ ಇಲಾಖೆ ಅಧಿಕಾರಿ ಡಾ. ತೋಟಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net