

ಹಿರಿಯೂರು: ಬಹುಗ್ರಾಮ ಕುಡಿವ ನೀರಿನ ಯೋಜನೆಯ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಜಿಪಂ-ತಾಪಂ ಸದಸ್ಯರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲು ಸದಸ್ಯರು ತೀರ್ಮಾನಿಸಿದರು.
ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
2009ರಲ್ಲಿ ತಾಲೂಕಿಗೆ ಮಂಜೂರಾದ ಬಹುಗ್ರಾಮ ಕುಡಿವ ನೀರಿನ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡಿದ್ದರೂ ಜೆ.ಜಿ.ಹಳ್ಳಿ-ಐಮಂಗಲ ಹೋಬಳಿ ಜನರಿಗೆ ಕುಡಿವ ನೀರು ಒದಗಿಸಲು ಸಾಧ್ಯವಾಗಿಲ್ಲ. ಪ್ರಾಯೋಗಿಕವಾಗಿ ನೀರು ಹರಿಸುವ ನೆಪದಲ್ಲಿ ಅಧಿಕಾರಿಗಳು ಕಾಲ ದೂಡುತ್ತಿದ್ದಾರೆ. ತಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ದೂರಿದರು.
ಅಕ್ರಮ ಸಕ್ರಮ ಯೋಜನೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ, ಟಿಸಿ ಅಳವಡಿಸಲು ಬೆಸ್ಕಾಂ ಕೆಲ ಅಧಿಕಾರಿಗಳು ಮಧ್ಯವರ್ತಿಗಳ ಜತೆಗೂಡಿ ರೈತರಿಂದ 80-90 ಸಾವಿರ ರೂ. ಪಡೆಯುತ್ತಿರುವುದರ ಬಗ್ಗೆ ದೂರು ಕೇಳಿ ಬಂದಿದೆ ಎಂದು ಜಿಪಂ ಅಧ್ಯಕ್ಷೆ-ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಸ್ಕಾಂ ಎಇಇ ತಿಮ್ಮರಾಯಪ್ಪ ಪ್ರತಿಕ್ರಿಯಿಸಿ, 2014-2020 ರ ಅವಧಿಯಲ್ಲಿ 2289 ರೈತರು ಅಕ್ರಮ-ಸಕ್ರಮ ಯೋಜನೆಯಲ್ಲಿ ವಿದ್ಯುತ್ ಸಂಪರ್ಕಕ್ಕೆ ನೊಂದಾಣಿ ಮಾಡಿದ್ದು, 1762 ರೈತರ ಪಂಪ್ ಸೆಟ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ, 339 ಬಾಕಿ ಇವೆ ಎಂದು ಸಭೆಗೆ ಮಾಹಿತಿ ನೀಡಿದರು.
ತಾಲೂಕಿನಲ್ಲಿ ಈವರೆಗೆ 10 ಸಾವಿರ ಜನರನ್ನು ಕ್ವಾಂರಟೈನ್ ಮಾಡಿ, 1500 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. 900 ಜನ ಹೊರ ರಾಜ್ಯದಿಂದ ತಾಲೂಕಿಗೆ ಆಗಮಿಸಿದ್ದಾರೆ ಎಂದು ಟಿಎಚ್‌ಒ ವೆಂಕಟೇಶ್ ತಿಳಿಸಿದರು. ಧರ್ಮಪುರ ಸಮುದಾಯ ಆರೋಗ್ಯ ಕೇಂದ್ರಲ್ಲಿ ವೈದ್ಯರು-ನರ್ಸ್, ಇತರೆ ಸಿಬ್ಬಂದಿ ಕೊರತೆ ಇದೆ. ಗಡಿಭಾಗವಾಗಿರುವುದರಿಂದ ಅಗತ್ಯ ಸಿಬ್ಬಂದಿ ನೇಮಿಸುವಂತೆ ಸದಸ್ಯೆ ತ್ರಿವೇಣಿ ಮನವಿ ಮಾಡಿದರು.
ತಾಪಂ ಅಧ್ಯಕ್ಷೆ ಲಕ್ಷಿ ್ಮದೇವಿ, ಉಪಾಧ್ಯಕ್ಷೆ ಪುಷ್ಪಾ ರಂಗನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ್, ಇಒ ಹನುಮಂತಪ್ಪ, ತಹಸೀಲ್ದಾರ್ ಸತ್ಯನಾರಾಯಣ, ಜಿಪಂ ಸದಸ್ಯರಾದ ರಾಜೇಶ್ವರಿ, ಗೀತಾ, ತ್ರಿವೇಣಿ, ಆರ್.ನಾಗೇಂದ್ರನಾಯ್ಕ, ಅಕ್ಷರ ದಾಸೋಹ ಅಧಿಕಾರಿ ಎಲ್.ನಾಗರಾಜಾಚಾರ್ ಇತರರಿದ್ದರು.
ಬೇಕಾಬಿಟ್ಟಿ ವೇದಾವತಿಗೆ ನೀರು: ಸರ್ಕಾರದ ಆದೇಶ ಮೀರಿ ವಿವಿ ಸಾಗರ ಜಲಾಶಯದಿಂದ ಬೇಕಾಬಿಟ್ಟಿಯಾಗಿ ವೇದಾವತಿ ನದಿಗೆ ನೀರು ಹರಿಸಲಾಗಿದೆ. ನೀರಾವರಿ ಇಲಾಖೆ ಎಇಇ ಪದೇ ಪದೆ ಸಭೆಗೆ ಗೈರಾಗುತ್ತಿದ್ದಾರೆ ಎಂದು ಜಿಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ನೀರಾವರಿ ಇಲಾಖೆ ಅಧಿಕಾರಿ ಶಿವಪ್ಪ ಮಾತನಾಡಿ, ವಿವಿ ಸಾಗರ ಜಲಾಶಯದಲ್ಲಿ ಪ್ರಸ್ತುತ 91.45 ಅಡಿ ನೀರು ಇದೆ. ಸರ್ಕಾರದ ಆದೇಶದಂತೆ ಜಲಾಶಯದ ಎಡ-ಬಲ ದಂಡೆ ನಾಲೆ ಮೂಲಕ ಸುವರ್ಣಮುಖಿ ನದಿ, ಮಸ್ಕಲ್, ಅಂಬಲಗೆರೆ, ಬಿದರಕೆರೆ ಇತರ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.