

ಹಿರಿಯೂರು: ಶೋಷಣೆ ಮುಕ್ತ ಸಮ ಸಮಾಜ ನಿರ್ಮಾಣಕ್ಕೆ ಸ್ಥಳೀಯ ಸರ್ಕಾರಗಳೇ ಅಡಿಪಾಯ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ತಾಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರದಿಂದ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ಲಭ್ಯವಾಗುತ್ತಿದೆ ಎಂದರು.
ಸ್ಥಳೀಯವಾಗಿ ವಿವಿಧ ತೆರಿಗೆ ರೂಪದ ಹಣ ಪಂಚಾಯಿತಿಗೆ ಅನುದಾನವಾಗಿ ಸಿಗುತ್ತದೆ. ಮೂಲ ಸೌಲಭ್ಯ, ಅಭಿವೃದ್ಧಿ ಕಾಮಗಾರಿಗಳ ಮೇಲುಸ್ತುವಾರಿ ಜನರೇ ವಹಿಸಿಕೊಳ್ಳಬೇಕು. ಇದರಿಂದ ಸ್ಥಳೀಯ ಸರ್ಕಾರಗಳು ಬಲಗೊಳ್ಳುತ್ತವೆ. ಜತೆಗೆ ಹಳ್ಳಿಗಳು ಸಮಗ್ರವಾಗಿ ಅಭಿವೃದ್ಧಿ ಕಾಣಲು ಸಾಧ್ಯ ಎಂದು ತಿಳಿಸಿದರು.
ತಾಪಂ ಸದಸ್ಯ ಕೆ.ಶಂಕರಮೂರ್ತಿ ಮಾತನಾಡಿ, ಶಿಡ್ಲಯ್ಯನಕೋಟೆ ಬ್ಯಾರೇಜ್‌ನಿಂದ ಕೆಲ ಕೆರೆಗಳಿಗೆ ನೀರು ತುಂಬಿಸುತ್ತಿರುವುದು ಶ್ಲಾಘನೀಯ. ಶತಮಾನದ ಬೇಡಿಕೆಯಾಗಿರುವ ಧರ್ಮಪುರ ಕೆರೆಗೆ ವಿವಿ ಸಾಗರದ ನೀರನ್ನು ಹರಿಸಲು ತಕ್ಷಣ ಯೋಜನೆ ರೂಪಿಸುವ ಅನಿವಾರ್ಯತೆ ಇದೆ, ಈ ಬಗ್ಗೆ ಶಾಸಕರು ಬದ್ಧತೆ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.
ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ತಾಪಂ ಇಒ ಹನುಮಂತಪ್ಪ, ಗ್ರಾಪಂ ಅಧ್ಯಕ್ಷೆ ಯಶೋದಮ್ಮ ಚಿಕ್ಕಣ್ಣ, ಉಪಾಧ್ಯಕ್ಷ ಕಿರಣ್‌ಕುಮಾರ್, ಮುಖಂಡರಾದ ರಾಘವೇಂದ್ರ, ಟಿ.ಚಂದ್ರಶೇಖರ್, ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಿ ಇತರರಿದ್ದರು.