

ಚಿತ್ರದುರ್ಗ: ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಗುರುವಾರ ರಾತ್ರಿ ಮತ್ತೆ 14 ಮನೆಗಳು ಹಾನಿಗೊಳಗಾಗಿವೆ. ಒಂದು ವಾರದಲ್ಲಿ 100ಕ್ಕೂ ಹೆಚ್ಚು ಮನೆಗಳು ಭಾಗಶಃ ನಷ್ಟಕ್ಕೀಡಾಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿ ಸಹ ಉಂಟಾಗಿದೆ. ಗುರುವಾರ ಹಿರಿಯೂರು ತಾಲೂಕಲ್ಲಿ 2, ಹೊಸದುರ್ಗ 5, ಮೊಳಕಾಲ್ಮೂರಲ್ಲಿ 7 ಮನೆಗಳಿಗೆ ಧಕ್ಕೆಯಾಗಿದೆ. ತಲಾ 3 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟವಾಗಿದೆ.
ಹಿರಿಯೂರು ತಾಲೂಕಿನಲ್ಲಿ ಕಳೆದ 15 ದಿನಗಳಿಂದ ಮಳೆ ಆರ್ಭಟ ಮುಂದುವರೆದಿದ್ದು, ಬಯಲುಸೀಮೆಯಲ್ಲಿ ಅಕ್ಷರಶಃ ಮಲೆನಾಡಿನಂತಹ ವಾತಾವರಣ ಮೂಡಿದೆ. ಹಗಲು ಹೊತ್ತು ದಟ್ಟವಾದ ಮೋಡ ಮುಸುಕಿದ ವಾತಾವರಣದಿಂದಾಗಿ ಸೂರ್ಯನ ದರ್ಶನ ಭಾಗ್ಯವೇ ಇಲ್ಲದಂತಾಗಿದೆ. ರಾತ್ರಿ ವೇಳೆ ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಮಳೆ ಅಬ್ಬರಿಸುತ್ತಿದ್ದು, ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳಿಗೆ ಜೀವ ಕಳೆ ಬಂದಿದೆ. ಎಲ್ಲಿ ನೋಡಿದರೂ ಜಲರಾಶಿಯ ಸೊಬಗು ಕಣ್ಮನ ಸೆಳೆಯುತ್ತಿದೆ.
ಸುವರ್ಣಮುಖಿ ನದಿಗೆ ಜೀವ ಕಳೆ: ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಕೆರೆಗಳು ತುಂಬಿ ಕೋಡಿ ಬಿದ್ದ ಪರಿಣಾಮ ಸುವರ್ಣಮುಖಿ ನದಿ ಮೈದುಂಬಿ ಹರಿಯುತ್ತಿದೆ. ಪೂರ್ವ ದಿಕ್ಕಿನಿಂದ ಹರಿದು ಬರುವ ಸುವರ್ಣಮುಖಿ ನದಿ ಹಾಗೂ ದಕ್ಷಿಣ ದಿಕ್ಕಿನಿಂದ ಹರಿದು ಬರುವ ವೇದಾವತಿ ನದಿಗಳು ಕೂಡ್ಲಹಳ್ಳಿ ಬಳಿ ಸಂಗಮವಾಗಿ ಮುಂದೆ ವೇದಾವತಿ ನದಿ ಎಂಬ ಅಭಿದಾನದಲ್ಲಿ ಉತ್ತರ ದಿಕ್ಕಿನತ್ತ ಹರಿದು ಚಳ್ಳಕೆರೆ ತಾಲೂಕು ಮೂಲಕ ಆಂಧ್ರಪ್ರದೇಶ ಸೇರುತ್ತದೆ.
ತೋಟಗಾರಿಕೆ ಬೆಳೆಗಳಿಗೆ ಹಾನಿ: ದಾಳಿಂಬೆ, ಪಪ್ಪಾಯಿ ಹಾಗೂ ರೇಷ್ಮೆ ಬೆಳೆಗೆ ಮಳೆ ಸಂಕಷ್ಟ ತಂದೊಡ್ಡಿದೆ. ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ. ತಾಲೂಕಿನ ಇಕ್ಕನೂರು ಗ್ರಾಮದಲ್ಲಿ 4, ರಂಗೇನಹಳ್ಳಿ 3, ಹಲಗಲದ್ದಿಯಲ್ಲಿ 1 ಮನೆಗೆ ಹಾನಿಯಾಗಿದೆ.
ಧರ್ಮಪುರ ಹೋಬಳಿಯಲ್ಲಿ 100 ಎಕರೆ ಟೊಮ್ಯಾಟೊ, 100 ಎಕರೆ ಹತ್ತಿ, 80 ಎಕರೆ ಶೇಂಗಾ, 20 ಎಕರೆ ಮೆಕ್ಕೆಜೋಳ, 50 ಎಕರೆ ಸೂರ್ಯಕಾಂತಿ, 5 ಎಕರೆ ಸೋಯಾಬಿನ್, 40 ಎಕೆರೆ ಪಪ್ಪಾಯಿ-ದಾಳಿಂಬೆ ಬೆಳೆ ಸಂಪೂರ್ಣ ಜಲಾವೃತವಾಗಿದೆ.
125 ಅಡಿ ನೀರು: ಈ ಭಾಗದವರ ಜೀವನಾಡಿ ಆಗಿರುವ ವಾಣಿ ವಿಲಾಸ ಸಾಗರ ಜಲಾಶಯದ ಒಳ ಹರಿವು 2554 ತಲುಪಿದೆ. ಪ್ರಸ್ತುತ ಜಲಾಶಯದಲ್ಲಿ 125 ಅಡಿ ನೀರಿನ ಸಂಗ್ರಹವಿದೆ. 91 ವರ್ಷದ ನಂತರ ಜಲಾಶಯ ಕೋಡಿ ಬೀಳುವ ಸಾಧ್ಯತೆ ಹೆಚ್ಚಿದೆ.