ಕಾಡುಗೊಲ್ಲರ ಆರಾಧ್ಯ ದೈವ ಪಾರ್ಥಲಿಂಗೇಶ್ವರ ಸ್ವಾಮಿ

hiriyur kudlahalli Parthalingeshwara Temple
Published on

ಖಂಡೆನಹಳ್ಳಿ ಬಸವರಾಜ್  ಹಿರಿಯೂರು: ತಾಲೂಕಿನ ಕೂಡ್ಲಹಳ್ಳಿ ಗ್ರಾಮದ ಕಾಡುಗೊಲ್ಲರ ಆರಾಧ್ಯ ದೈವ ಪಾರ್ಥಲಿಂಗೇಶ್ವರ ಸ್ವಾಮಿ ದೇಗುಲ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ.

ಪರಶಿವನಿಗೆ ಸೇರಿದ ಪಾಶುಪತಾಸ್ತ್ರವನ್ನು ಅರ್ಜುನ ಪಡೆವ ಸಂದರ್ಭದಲ್ಲಿ ವೇದಾವತಿ ನದಿಯ ಕೂಗಳತೆ ದೂರದಲ್ಲಿರುವ ಕೂಡ್ಲಹಳ್ಳಿ ಗ್ರಾಮದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಲಾಗಿದೆ ಎಂಬುದು ಸ್ಥಳೀಯರ ನಂಬಿಕೆ.

ನೂರಾರು ವರ್ಷಗಳ ಇತಿಹಾಸವಿರುವ ದೇವಾಲಯ ಕಾಡುಗೊಲ್ಲ ಸಮುದಾಯದ ಮೂಲ ಪುರುಷ ಕರಡಿ ಬುಳ್ಳಪ್ಪ ನೇತೃತ್ವದಲ್ಲಿ ನಿರ್ಮಾಣವಾಗಿದೆ.

ಜೀರ್ಣೋದ್ಧಾರ

ಶತಮಾನದ ಇತಿಹಾಸವಿರುವ ದೇಗುಲವನ್ನು 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. 2017ರಲ್ಲಿ ಜೀರ್ಣೋದ್ಧಾರವಾದ ಈ ದೇವಸ್ಥಾನದ ಉದ್ಘಾಟನೆ ಧಾರ್ಮಿಕ ಕಾರ್ಯ ಅದ್ಧೂರಿಯಾಗಿ ನೆರವೇರಿತ್ತು.

ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರು ಭಾಗವಹಿಸಿದ್ದು ವಿಶೇಷ. ತಾಲೂಕಿನ ಬ್ಯಾಡರಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ತಿಮ್ಮಪ್ಪ ಸ್ವಾಮಿ ಸಾರಥ್ಯದಲ್ಲಿ ಪಾರ್ಥಲಿಂಗೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ಇತರೆ ಧಾರ್ಮಿಕ ಕಾರ್ಯ ನಡೆಯುತ್ತದೆ. ಮಾಘ ಮಾಸ, ಶ್ರಾವಣ ತಿಂಗಳಲ್ಲಿ ವೈಭವದಿಂದ ಸ್ವಾಮಿ ಜಾತ್ರೋತ್ಸವ-ಧಾರ್ಮಿಕ ಕಾರ್ಯ ಜರುಗುತ್ತವೆ.

ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಮಾಗಡಿ, ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಆಂಧ್ರದ ಅನಂತಪುರ ಜಿಲ್ಲೆಯಿಂದ ಸಾವಿರಾರು ಭಕ್ತರು ಆಗಮಿ ಸುತ್ತಾರೆ. ಪಾರ್ಥಲಿಂಗೇಶ್ವರ ಸ್ವಾರ್ಮಿ ಗರ್ಭಗುಡಿ ಪಕ್ಕದಲ್ಲಿ ದ್ಯಾಮಲಾಂಬ ದೇವಿ ವಿಗ್ರಹ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.

ಕಾಡುಗೊಲ್ಲರ ಸಾಂಸ್ಕೃತಿಕ, ಧಾರ್ಮಿಕ ನಂಬಿಕೆಯ ಪ್ರತೀಕವಾದ ಆರಾಧ್ಯ ದೈವ ಪಾರ್ಥಲಿಂಗೇಶ್ವರಸ್ವಾಮಿ ಐತಿಹಾಸಿಕ ದೇಗುಲಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ನಂಬಿ ಬಂದ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ. ಪೂಜಾರ್ ಕೃಷ್ಣಪ್ಪ ಗ್ರಾಮಸ್ಥ, ಕೂಡ್ಲಹಳ್ಳಿ

ಹಾಲು-ತುಪ್ಪ ಮೀಸಲು ಸೇವೆ

ಚಿತ್ರದುರ್ಗ ತಾಲೂಕು ಟಗರನಹಟ್ಟಿ ಗ್ರಾಮದ ಭಕ್ತರು ಬರಿಗಾಲಿನಲ್ಲಿ ನಡೆದು ಬಂದು ಹಾಲು-ತುಪ್ಪ ಮೀಸಲನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ನಿತ್ಯ ಸ್ವಾಮಿ ಗೆ ಪೂಜೆ, ಸೋಮವಾರ ಹಾಗೂ ಹಬ್ಬದ ದಿನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗುತ್ತದೆ.

ಎಲ್ಲಿದೆ

ಹಿರಿಯೂರಿನಿಂದ 18 ಕಿ.ಮೀ. ದೂರದಲ್ಲಿದೆ. ಹಿರಿಯೂರು ಪಾವಗಡ ರಾಜ್ಯ ಹೆದ್ದಾರಿ 24ರ ಮಾರ್ಗದಲ್ಲಿ ಬರುವ ಭಕ್ತರು, ಮಸ್ಕಲ್ ಮಟ್ಟಿ, ಕೂಡ್ಲಹಳ್ಳಿ ಗೇಟ್ ನಿಂದ ದೇವಸ್ಥಾನ ತಲುಪಬಹುದು.

ವಿಶೇಷ ಧಾರ್ಮಿಕ ಕಾರ್ಯ

ಫೆಬ್ರವರಿ ತಿಂಗಳ ಮಘಾ ನಕ್ಷತ್ರದಲ್ಲಿ ಕಾಳು ಹಬ್ಬ ಆಚರಣೆ, ಶಿವರಾತ್ರಿ, ಗೌರಿ ಗಣೇಶ, ನಾಗರ ಪಂಚಮಿ ಹಬ್ಬದ ದಿನದಲ್ಲಿ ವಿಶೇಷ ಧಾರ್ಮಿಕ ಆಚರಣೆ, ಪೂಜೆ ಪುನಸ್ಕಾರ, ಕಡೇ ಕಾರ್ತಿಕೋತ್ಸವದ ವೇಳೆ ದೀಪಾರಾಧನೆ ಧಾರ್ಮಿಕ ಕಾರ್ಯಗಳು ನೇರವೇರುತ್ತವೆ. ಪಾರ್ಥಲಿಂಗೇಶ್ವರ ಸ್ವಾಮಿಗೆ ನಾಡಿನಾದ್ಯಂತ ಹಾಗೂ ಆಂಧ್ರಪ್ರದೇಶದಲ್ಲಿಯೂ ಭಕ್ತರಿದ್ದಾರೆ.

ಮೂಲ ಸೌಲಭ್ಯ ಅಗತ್ಯ

ಜಾತ್ರೋತ್ಸವ-ಹಬ್ಬ ಹರಿದಿನದಲ್ಲಿ ಧಾರ್ಮಿಕ ಆಚರಣೆ ಹಾಗೂ ಅನ್ನಸಂತರ್ಪಣೆಗೆ ಸುಸಜ್ಜಿತ ಸಮುದಾಯ ಭವನ, ಮೂಲ ಸೌಕರ್ಯದ ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net