ಹೇಮಾವತಿ ಹೆಂಜೇರು ರಥೋತ್ಸವ

HYR Hemavati 26
Published on

ಹಿರಿಯೂರು; ಕರ್ನಾಟಕ-ಆಂಧ್ರ ಗಡಿ ಗ್ರಾಮ ಹೇಮಾವತಿ ಶ್ರೀ ಹೆಂಜೇರು ಸಿದ್ದೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.

ರಥೋತ್ಸವದ ನಿಮಿತ್ತ ಉತ್ಸವ ಮೂರ್ತಿಗಳಿಗೆ ಅಭಿಷೇಕ, ಗಂಗಾಪೂಜೆ, ಮಹಾಮಂಗಳಾರತಿ ಇತರ ಧಾರ್ಮಿಕ ಕಾರ್ಯ ನೆರವೇರಿಸಲಾಯಿತು. ಮಧ್ಯಾಹ್ನ 2ಕ್ಕೆ ಮೆರವಣಿಗೆ ಮೂಲಕ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ದೇಗುಲದ ಅರ್ಚಕರು ರಥಕ್ಕೆ ವಿಧಿವಿಧಾನ ಪೂರೈಸಿದ ಬಳಿಕ ಗೋವುಗಳಿಗೆ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ತೇರಿನ ಕಳಸಕ್ಕೆ ಬಾಳೆ ಹಣ್ಣು, ಮಂಡಕ್ಕಿ, ಸೂರು ಬೆಲ್ಲ ತೂರಿ ಭಕ್ತಿ ಸಮರ್ಪಿಸಿದರು.

ವೀರಗಾಸೆ, ಪೂಜಾ ಕುಣಿತ, ತಮಟೆ, ನಗಾರಿ, ಡೊಳ್ಳು ಕುಣಿತ ಕಲಾವಿದರ ಆಕರ್ಷಕ ನೃತ್ಯ ಗಮನ ಸೆಳೆಯಿತು. ಗ್ರಾಮೀಣ ಸೊಗಡಿನ ಕಾರ್ಯಕ್ರಮಗಳು ನಡೆದವು.

ಕರ್ನಾಟಕ-ಆಂಧ್ರ, ತಮಿಳುನಾಡಿನಿಂದ ಆಗಮಿಸಿದ್ದ ಭಕ್ತರಿಗೆ ದೇವಸ್ಥಾನ ಸೇವಾ ಸಮಿತಿ ವಸತಿಯಿಂದ ಊಟ, ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಿತ್ತು. ಹರಕೆ ಹೊತ್ತ ಭಕ್ತರು ದೇಗುಲದ ಮುಂದಿನ ಅಗ್ನಿಕುಂಡಕ್ಕೆ ಶೇಂಗಾ, ಔಡಲ, ಕೊಬ್ಬರಿ, ಧೂಪ ಸಮರ್ಪಿಸಿದರು.

ಶ್ರೀಕ್ಷೇತ್ರದ ಹಿನ್ನೆಲೆ: 7ನೇ ಶತಮಾನದಲ್ಲಿ ಹೇಮಾವತಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದ ನೊಳಂಬವಾಡಿ ಅರಸರು, ಹೆಂಜೇರು ಸಿದ್ದೇಶ್ವರ ಸ್ವಾಮಿಯ ಪಂಚಲಿಂಗ ದೇವಾಲಯ ನಿರ್ಮಿಸಿದ್ದರು. ಇಲ್ಲಿ ದೊರೆತಿರುವ ಅನೇಕ ಶಾಸನಗಳು ಕನ್ನಡ, ತೆಲುಗು ಭಾಷಿಕರ ಸಾಂಸ್ಕೃತಿಕ ಸಂಬಂಧ, ಜೀವನ ವಿಧಾನ ತಿಳಿಸುತ್ತವೆ. ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಮಾಘ ಚರ್ತುದರ್ಶಿಯಂದು ಜಾತ್ರಾ ಮಹೋತ್ಸವ ನಡೆಯಲಿದ್ದು, ಗಡಿನಾಡ ಕನ್ನಡಿಗರು-ತೆಲುಗು ಭಾಷಿಕರಲ್ಲಿ ಹಬ್ಬದ ಸಂಭ್ರಮ ಮನೆ ಮಾಡುತ್ತದೆ. ಇಲ್ಲಿ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕನ್ನಡ ಭಾಷೆ ಬಳಸುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net