

ಹಿರಿಯೂರು: ಇಲ್ಲಿನ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಮಾಜಮುಖಿ ಕಾರ್ಯಕ್ಕೆ 7 ನೇ ಬಾರಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ರಾಜ ಭವನದಲ್ಲಿ ನಡೆದ ರೆಡ್‌ಕ್ರಾಸ್ ಸಂಸ್ಥೆಯ 2019-20ನೇ ಸಾಲಿನ ಸಾಮಾನ್ಯ ಸಭೆಯಲ್ಲಿ ರಾಜ್ಯ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಸುಂದರ್‌ರಾಜ್ ಅವರಿಗೆ, ರಾಜ್ಯಪಾಲ ವಜುಬಾಯಿ ವಾಲಾ ಅವರು ಬೆಸ್ಟ್ ತಾಲೂಕು ಪ್ರಶಸ್ತಿ ನೀಡಿ ಗೌರವಿಸಿದರು.
ರೆಡ್‌ಕ್ರಾಸ್ ಸಂಸ್ಥೆ ದಶಕಗಳಿಂದ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ತಾಲೂಕಿನ ವಿವಿಧೆಡೆ ಆರೋಗ್ಯ-ರಕ್ತದಾನ ಶಿಬಿರ ಆಯೋಜಿಸಿ ಸಾವಿರಾರು ಜನರಿಗೆ ಆರೋಗ್ಯ ಸೇವೆ ಒದಗಿಸಿರುವುದನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ಎಂ.ಎಸ್. ರಾಘವೇಂದ್ರ ತಿಳಿಸಿದರು.
ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಸುಂದರ್‌ರಾಜ್ ಮಾತನಾಡಿ, ಬಡ ಜನರ ಪಾಲಿಗೆ ರೆಡ್‌ಕ್ರಾಸ್ ಸಂಸ್ಥೆ ಸಂಜೀವಿನಿಯಿದ್ದಂತೆ. ಇದರ ಸಮಾಜಮುಖಿ-ಜೀವಪರ ಕಾರ್ಯ ಗುರುತಿಸಿ ಸತತ 7ನೇ ಬಾರಿಗೆ ಬೆಸ್ಟ್ ತಾಲೂಕು ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ ಎಂದರು.