

ಹಿರಿಯೂರು: ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಭೂಮಿ ವಶಪಡಿಸಿಕೊಂಡಿದ್ದು, ರೈತರಿಗೆ ನ್ಯಾಯಯುತ ಪರಿಹಾರ ನೀಡದಿದ್ದರೆ ಕಂಪನಿ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಎಚ್ಚರಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಸತ್ಯನಾರಾಯಣ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಕಂಪನಿ ಅಧಿಕಾರಿಗಳು, ರೈತಸಂಘದ ಸಭೆಯಲ್ಲಿ ಮಾತನಾಡಿದರು.
ಭೂಸ್ವಾಧೀನ, ವಿದ್ಯುತ್ ಕಂಬ, ತಂತಿ ಅಳವಡಿಸಿದ ಬಳಿಕ ರೈತರಿಗೆ ಪರಿಹಾರ ನೀಡದೇ ನಾಲ್ಕೈದು ವರ್ಷದಿಂದ ಅಲೆದಾಡಿಸಲಾಗುತ್ತಿದೆ. ಭೂಸ್ವಾಧೀನಕ್ಕೆ ಮೊದಲು ರೈತರಿಗೆ ನೋಟಿಸ್ ನೀಡಿಲ್ಲ. ಜತೆಗೆ ಕಾಮಗಾರಿಯನ್ನು ಆರಂಭಿಸಿ ರೈತರಿಗೆ ಕಿರುಕುಳ ನೀಡಿ, ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ದೂರಿದರು.
ಪರಿಹಾರ ವಿತರಣೆಯಲ್ಲಿ ಆಗಿರುವ ತಾರತಮ್ಯ ಸರಿಪಡಿಸುವ ತನಕ ಲೈನ್ ಚಾರ್ಜ್ ಮಾಡಲು ಬಿಡುವುದಿಲ್ಲ ರೈತರು ಪಟ್ಟು ಹಿಡಿದರು.
ರೈತ ಸತೀಶ್ ಕುಮಾರ್ ಮಾತನಾಡಿ, ಹಿರಿಯೂರು, ಪಾವಗಡ ಮಾರ್ಗದಲ್ಲಿ ವಿದ್ಯುತ್ ಲೈನ್ ನಿರ್ಮಿಸುವ ವೇಳೆ ತೋಟಗಳಲ್ಲಿ ಎಷ್ಟು ತೆಂಗು ಮತ್ತು ಮಾವಿನ ಕಡಿಯಬೇಕು ಮತ್ತು ಪರಿಹಾರ ನೀಡಬೇಕೆಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಈವರೆಗೆ ಪರಿಹಾರ ಮಾತ್ರ ನೀಡಿಲ್ಲ ಎಂದು ಅಳಲು ತೋಡಿಕೊಂಡರು.
ತೋಟಗಾರಿಕೆ ಇಲಾಖೆಯಿಂದ ವರದಿ ನೀಡಿರುವ ರೈತರಿಗೆ ಪರಿಹಾರ ನೀಡಿಕೆಯಲ್ಲಿ ತಡ ಮಾಡಬಾರದು. ಪರಿಹಾರ ವಿತರಣೆ ವಿಳಂಬದ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇನೆ ಎಂದು ಸತ್ಯನಾರಾಯಣ ಭರವಸೆ ನೀಡಿದರು.
ಸರ್ಕಾರದ ನಿಯಮ ಹಾಗೂ ಜಿಲ್ಲಾಧಿಕಾರಿ ಆದೇಶದಂತೆ ಪರಿಹಾರ ನೀಡುತ್ತೇವೆ ಎಂದು ಕಂಪನಿ ಮುಖ್ಯ ವ್ಯವಸ್ಥಾಪಕ ಸುರೇಶ್ ತಿಳಿಸಿದರು.
ಸಿಪಿಐ ರಾಘವೇಂದ್ರ, ಪಿಎಸ್‌ಐಗಳಾದ ಪರಮೇಶ್, ನಾಗರಾಜ್, ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಕೆ.ಸಿ.ಹೊರಕೇರಪ್ಪ, ಶಿವಕುಮಾರ್, ಸಿದ್ದರಾಮಣ್ಣ, ಲಕ್ಷ್ಮೀಪತಿ, ತಿಮ್ಮಾರೆಡ್ಡಿ, ಸಿದ್ದಪ್ಪ, ಪಾಂಡುರಂಗಪ್ಪ, ಬಿ.ಆರ್.ರಂಗಸ್ವಾಮಿ, ಅರಳೀಕೆರೆ ತಿಪ್ಪೇಸ್ವಾಮಿ, ಶಿವಲಿಂಗಪ್ಪ ಇತರರಿದ್ದರು.