ಅಚ್ಚುಕಟ್ಟು ಪ್ರದೇಶಕ್ಕೆ ವಿವಿ ಸಾಗರ ನೀರು

VV sagara 1
Published on

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ವಾಣಿವಿಲಾಸ ಸಾಗರ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಜೂ. 23 ರಿಂದ ಮತ್ತೆ ನೀರು ಹರಿಸಲಿದ್ದು, ನದಿಪಾತ್ರದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ತಾಲೂಕಿನ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರನ್ನು ಒದಗಿಸಲು ವಿವಿ ಸಾಗರದಿಂದ ಎಡ-ಬಲ ದಂಡೆ ಮೂಲಕ ಜೂ. 23 ರಿಂದ 30 ದಿನಗಳ ಕಾಲ 1 ಟಿಎಂಸಿ ಅಡಿ ನೀರು ಹರಿಸಲಾಗುತ್ತದೆ.

ಮಾರ್ಚ್ 6 ರಿಂದ ಒಂದು ತಿಂಗಳ ಕಾಲ ಎಡ-ಬಲ ದಂಡೆ ನಾಲೆಗಳಿಗೆ ನೀರು ಹರಿಸಲಾಗಿತ್ತು. ವಿವಿ ಸಾಗರದಿಂದ ವೇದಾವತಿ ನದಿ ಮೂಲಕ ಚಳ್ಳಕೆರೆ-ಮೊಳಕಾಲ್ಮೂರು ತಾಲೂಕಿಗೆ ಈಗಾಗಲೇ 2 ಟಿಎಂಸಿಗೂ ಹೆಚ್ಚು ನೀರು ಹರಿಬಿಡಲಾಗಿದ್ದು, ಹಿರಿಯೂರು-ಚಳ್ಳಕೆರೆ ತಾಲೂಕಿನ ನದಿಪಾತ್ರದಲ್ಲಿ ಈಗಾಗಲೇ ಕೃಷಿ ಚಟುವಟಿಕೆ-ಕುಡಿವ ನೀರಿಗೆ ಅನುಕೂಲವಾಗಿದೆ.

ಕಳೆದ ಎರಡು ತಿಂಗಳಿಂದ ಅಚ್ಚುಕಟ್ಟು ಪ್ರದೇಶ, ನದಿಪಾತ್ರ, ಸುರ್ವಣಮುಖಿ-ವೇದಾವತಿ ನದಿ, ಕೆರೆ-ಕಟ್ಟೆ, ಬ್ಯಾರೇಜ್ ಚೆಕ್‌ಡ್ಯಾಂ ತುಂಬಿದ್ದು ಅಂತರ್ಜಲ ವೃದ್ಧಿ, ಪ್ರಾಣಿ ಪಕ್ಷಿ ಸಂಕುಲಕ್ಕೆ ವರದಾನವಾಗಿದೆ. ವೇದಾವತಿ ನದಿಪಾತ್ರ-ಅಚ್ಚುಕಟ್ಟು ಪ್ರದೇಶದಲ್ಲಿ ಮಲೆನಾಡಿನ ಸೊಬಗು, ತಂಪಾದ ವಾತಾವರಣ ನಿರ್ಮಾಣವಾಗಿದೆ.

ಪ್ರಸಕ್ತ ವರ್ಷ ಎರಡನೇ ಬಾರಿಗೆ ನಾಲೆಗಳಿಗೆ ನೀರು ಹರಿಸುತ್ತಿದ್ದು, ರೈತರು ಮತ್ತೆ ತೆಂಗು ಕೃಷಿಯತ್ತ ಮುಖಮಾಡಿದ್ದಾರೆ. ತೋಟಗಾರಿಕೆ ಇಲಾಖೆ ಆವರಣದಲ್ಲಿ ತೆಂಗಿನ ಸಸಿ ಬೆಳೆಸಿದ್ದು, ಈಗಾಗಲೇ 5 ಸಾವಿರ ಸಸಿಗಳು ಮಾರಾಟವಾಗಿವೆ.

ಭದ್ರೆ ತ್ವರಿತ: ರಾಜ್ಯ ಸರ್ಕಾರದ ಇಚ್ಛಾಶಕ್ತಿ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೇಗ ಪಡೆದಿದ್ದು, ರೈಲ್ವೆ ಅಂಡರ್ ಪಾಸ್ ಕಾಮಗಾರಿ ವಿಘ್ನ ನಿವಾರಣೆಯಾಗಿರುವುದು ಪ್ರಸಕ್ತ ಸಾಲಿನಲ್ಲಿ ಭದ್ರೆ ಮತ್ತೆ ವಿವಿ ಸಾಗರದ ಒಡಲು ಸೇರುವುದು ಖಚಿತವಾಗಿದೆ.

ಪ್ರಸ್ತುತ ನೀರಿನ ಸಂಗ್ರಹ: 91.46
ಏಪ್ರಿಲ್ 2020-ಜೂನ್ 16 ರವರೆಗೆ ಹೊರ ಹರಿಸಿದ ನೀರಿನ ಪ್ರಮಾಣ 2.12 ಟಿಎಂಸಿ

ಕೆ.ಪೂರ್ಣಿಮಾ ಶ್ರೀನಿವಾಸ್, ಶಾಸಕಿ.

ಬಿಎಸ್‌ವೈ ಸರ್ಕಾರದ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತ ಪೂರ್ಣಗೊಳ್ಳಲಿದ್ದು, ಜಿಲ್ಲೆಯ ಜನರ ನೀರಿನ ಬವಣೆ ದೂರಾಗುವ ಕಾಲ ಸನ್ನಿಹಿತವಾಗಿದೆ.

ಅಚ್ಚುಕಟ್ಟು ಪ್ರದೇಶಕ್ಕೆ ಮತ್ತೆ ನೀರು ಹರಿಸುತ್ತಿರುವುದು ಡಬಲ್ ಖುಷಿ ತಂದಿದೆ. ಧರ್ಮಪುರ ಕೆರೆಗೆ ನೀರು ತುಂಬಿಸುವ ಆಶಾಭಾವನೆ ಜನರಲ್ಲಿ ಮೂಡಿದೆ.
> ಕಸವನಹಳ್ಳಿ ರಮೇಶ್, ರೈತ ಮುಖಂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net