

ಹಿರಿಯೂರು: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತ ಪೂರ್ಣಗೊಳಿಸಿ, ಕೆರೆಗಳಿಗೆ ನೀರು ಹರಿಸುವ ಮೂಲಕ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ರೈತ ಸಂಘದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ರೈತರು, ವಿವಿಧ ಸಂಘಟನೆಗಳ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಿದೆ ಎಂದರು.
ವಿವಿ ಸಾಗರಕ್ಕೆ ಕನಿಷ್ಠ 10 ಟಿಎಂಸಿ ಅಡಿ ನೀರು ಅವಶ್ಯವಿದ್ದು, ವೇದಾವತಿ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಧರ್ಮಪುರ, ರಂಗೇನಹಳ್ಳಿ, ವಿ.ಕೆ.ಗುಡ್ಡ, ಖಂಡೇನಹಳ್ಳಿ, ಹೊಸಕೆರೆ, ಬೇತೂರು, ಹಲಗಲದ್ದಿ, ಶ್ರವಣಗೆರೆ ಕೆರೆಗೆ ನೀರು ತುಂಬಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೆಳೆ ಹಾನಿ ಪರಿಹಾರ, ಶೇಂಗಾಕ್ಕೆ ಬೆಂಬಲ ಬೆಲೆ ಘೋಷಣೆ, ಖರೀದಿ ಕೇಂದ್ರ ಆರಂಭ, ಹಕ್ಕುಪತ್ರ ವಿತರಣೆ, ರೈತರ ಜಮೀನಿಗೆ ದಾರಿ ಸಂಪರ್ಕ ಇತರೆ ಬೇಡಿಕೆ ಈಡೇರಿಕೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲೂಕಾಧ್ಯಕ್ಷ ಎ.ಕೃಷ್ಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ನುಲೇನೂರು ಶಂಕರಪ್ಪ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ಶಿವಕುಮಾರ್, ಪುಟ್ಟಸ್ವಾಮಿ, ಲಕ್ಷ್ಮೀಕಾಂತ್, ರುದ್ರಸ್ವಾಮಿ, ದಸ್ತಗಿರಿ ಸಾಬ್, ವಿ.ಕಲ್ಪನಾ, ರತ್ನಮ್ಮ, ಜೆ.ಎಚ್.ಗೌಡ, ರಂಗಸ್ವಾಮಿ ಇತರರಿದ್ದರು.