

ಹಿರಿಯೂರು: ತಾಲೂಕಿನ ಅನ್ನದಾತರ ಹಿತ ಕಾಯಲು ಬದ್ಧ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ತಾಲೂಕು ಕಚೇರಿ ಬಳಿ ಹಮ್ಮಿಕೊಂಡಿದ್ದ ರೈತರ ಧರಣಿ ನಿರತ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿದರು.
ನೀರಾವರಿ ಮತ್ತು ರೈತ ಪರ ಯೋಜನೆ ಅನುಷ್ಠಾನಕ್ಕೆ ಕಳೆದ ಎರಡು ವರ್ಷದಿಂದ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿದ್ದು, ಸಿಎಂ ಬಿಎಸ್‌ವೈ ಅವರ ಇಚ್ಛಾಶಕ್ತಿ ಫಲವಾಗಿ ವಿವಿ ಸಾಗರ ಜಲಾಶಯಕ್ಕೆ ಭದ್ರೆ ಹರಿದಿದೆ. ಎಡ-ಬಲ ದಂಡೆ ನಾಲೆಗಳ ದುರಸ್ತಿ ಕಾರಣ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹಾಯಿಸುವುದು ವಿಳಂಬವಾಗಿದೆ ಎಂದರು.
ಕುಡಿವ ನೀರಿನ ಉದ್ದೇಶಕ್ಕೆ ಹಾಗೂ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ತಕ್ಷಣ ನೀರು ಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು, ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದು, ನೀರು ಹರಿಸಲು ಇಂದು ಸಮಯ ನಿಗದಿಯಾಗಲಿದೆ. ಹೀಗಾಗಿ ಪ್ರತಿಭಟನೆ ಹಿಂಪಡೆಯಿರಿ ಎಂದು ಮನವಿ ಮಾಡಿದರು.
ಶಾಸಕರ ಮನವಿಗೆ ಸ್ಪಂದಿಸಿದ ರೈತರು, ಇಂದೇ ಆದೇಶ ಹೊರಡಿಸದಿದ್ದರೆ ಅಹೋರಾತ್ರಿ ಧರಣಿ ಮುಂದುವರೆಸಿ, ಶುಕ್ರವಾರ ಹಿರಿಯೂರು ಬಂದ್ ನಡೆಸಲಾಗುವುದೆಂದು ಎಚ್ಚರಿಸಿ ಧರಣಿ ಹಿಂಪಡೆದರು.
ರೈತರ ಸಂಘದ ತಾಲೂಕಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲಾಡಳಿತ ರೈತರ ಜತೆ ಚೆಲ್ಲಾಟವಾಡುವುದನ್ನು ಬಿಟ್ಟು ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕು. ಇಲ್ಲದಿದ್ದರೆ ತಾಲೂಕಿನ ಸಾವಿರಾರು ರೈತರು ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಾಸಕಿ ಕೆ.ಪೂರ್ಣಿಮಾ ಅವರು, ಸತ್ಯಾಗ್ರಹ ನಿರತ ರೈತರಿಗೆ ಹಣ್ಣಿನ ರಸ ನೀಡುವ ಮೂಲಕ ಧರಣಿ ಸತ್ಯಾಗ್ರಹ ಮುಕ್ತಾಯಗೊಳಿಸಿದರು.
ವಿವಿ ಸಾಗರ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್, ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ಕಲ್ಪನಾ, ಆಲೂರು ಶಿವಕುಮಾರ್, ಸಿದ್ದರಾಮಣ್ಣ, ಈರಣ್ಣ, ದಸ್ತಗಿರಿ ಸಾಬ್, ಅರಳಿಕೆರೆ ತಿಪ್ಪೇಸ್ವಾಮಿ, ತಾಪಂ ಸದಸ್ಯ ಓಂಕಾರಪ್ಪ, ನಗರ ಸಭೆ ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್, ನಾರಾಯಣಾಚಾರ್ ಇತರರಿದ್ದರು.
ಜಿಲ್ಲಾಧಿಕಾರಿ ಆದೇಶ: ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ಮಾ.3ರಂದು ನೀರು ಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಬುಧವಾರ ಸಂಜೆ ಲಿಖಿತ ಆದೇಶ ಹೊರಡಿಸಿದರು.