ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಸಜ್ಜು

HYR D pura spl
Published on

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ವಿವಿ ಸಾಗರ ಜಲಾಶಯದಿಂದ ಅನ್ಯ ತಾಲೂಕುಗಳಿಗೆ ನೀರು ಹರಿಸಲಾಗುತ್ತದೆ. ಆದರೆ, ತಾಲೂಕಿನ ಧರ್ಮಪುರ ಕೆರೆಗೆ ಹರಿಸಲು ನಿರ್ಲಕ್ಷೃ ವಹಿಸಿರುವುದು ಹೋಬಳಿ ರೈತರಲ್ಲಿ ಕಿಚ್ಚು ಹಚ್ಚಿಸಿದ್ದು, ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಸ್ಥಳೀಯ ವಿವಿಧ ಸಂಘಟನೆ ನೇತೃತ್ವದಲ್ಲಿ ರೈತರು ಹೋರಾಟ ರೂಪಿಸಿ ಜನಪ್ರತಿನಿಧಿಗಳು-ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಲಾಗಿದೆ. ಸತತ ಬರ, ಅಂತರ್ಜಲ ಕುಸಿತದಿಂದ ಜನ-ಜಾನುವಾರು ಹನಿ ನೀರಿಗೂ ಪರದಾಡುತ್ತಿದ್ದು, ಹೋಬಳಿಯ ವಿವಿಧೆಡೆ ಟ್ಯಾಂಕರ್ ಮೂಲಕ ಕುಡಿವ ನೀರು ಪೂರೈಕೆ ಮಾಡಲಾಗುತ್ತಿದೆ.

ಶತಮಾನದ ಹೋರಾಟ: ಧರ್ಮಪುರ ಕೆರೆಗೆ ಯಾವುದಾದರು ಮೂಲದಿಂದ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಇಲ್ಲಿನ ರೈತರ ಹೋರಾಟ ಶತಮಾನ ಕಳೆದರೂ ಸರ್ಕಾರ-ಜನಪ್ರತಿನಿಧಿಗಳು ಸ್ಪಂದನೆ ಶೂನ್ಯ. ಧರ್ಮಪುರ ಫೀಡರ್ ನಾಲೆ ವಿಷಯ ಮೂರು ಪಕ್ಷಗಳ ಚುನಾವಣೆ ಅಸ್ತ್ರವಾಗಿದೆ.

ನಮ್ಮ ಜನಪ್ರತಿನಿಧಿಗಳಿಗೆ ಏಕೆ ಅಸಾಧ್ಯ: ನಮ್ಮ ರಾಜ್ಯದ ತುಂಗಭದ್ರಾ ಜಲಾಶಯದ ನೀರನ್ನು ಆಂಧ್ರಪ್ರದೇಶದ ಸರ್ಕಾರದ ಇಚ್ಛಾಶಕ್ತಿ ಫಲವಾಗಿ 1500 ಕೆರೆಗಳಿಗೆ ನೀರು ತುಂಬಿಸಿದೆ. ಅಕ್ಕಪಕ್ಕದ ತಾಲೂಕಿನ ಜನಪ್ರತಿನಿಧಿಗಳು ಜನರ ಹಿತ ಕಾಯಲು ತಮ್ಮ ಕ್ಷೇತ್ರಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಚ್ಛಾಶಕ್ತಿ ಕೊರತೆ: ರಾಜ್ಯದಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ತನ್ನದೇ ಆದ ರಾಜಕೀಯ ಇತಿಹಾಸವಿದೆ. ಅನೇಕ ಮುತ್ಸದ್ದಿ ರಾಜಕಾರಣಿಗಳು ಕ್ಷೇತ್ರವನ್ನು ಪ್ರತಿನಿಧಿಸಿದರೂ ತಾಲೂಕಿಗೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್-ಜೆಡಿಎಸ್ ಭದ್ರ ಕೋಟೆಯಲ್ಲಿ ಈ ಬಾರಿ ಕಮಲ ಅರಳಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಬಹು ಗ್ರಾಮ ಕುಡಿವ ನೀರು ಯೋಜನೆ, ಧರ್ಮಪುರ ಕೆರೆಗೆ ಶಾಶ್ವತ ನೀರಾವರಿ ಸೌಲಭ್ಯ ಮರೀಚಿಕೆಯಾಗಿದೆ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ನೀರಾವರಿ ವಿಚಾರದಲ್ಲಿ ಜ್ಞಾನ ಇಲ್ಲ: ಚಳ್ಳಕೆರೆ-ಮೊಳಕಾಲ್ಮೂರು ತಾಲೂಕುಗಳಿಗೆ ಭದ್ರಾ ಹಿನ್ನೀರು ಯೋಜನೆಯಿಂದ ಶಾಶ್ವತ ಕುಡಿವ ನೀರು ಸೌಲಭ್ಯ ಸಿಗಲಿದೆ. ಈಗಾಗಲೇ ಚಳ್ಳಕೆರೆ ಪಟ್ಟಣಕ್ಕೆ ವಿವಿ ಸಾಗರ ಜಲಾಶಯದಿಂದ ನೀರು ಪೂರೈಕೆಯಾಗುತ್ತಿದೆ. ಇದರ ನಡುವೆ ವೇದಾವತಿ ನದಿ ಮೂಲಕ ನೀರು ಹರಿಸಲಾಗುತ್ತಿದೆ. ನಮ್ಮ ಜನಪ್ರತಿನಿಧಿಗಳು ನೀರಾವರಿ ವಿಚಾರದಲ್ಲಿ ಜ್ಞಾನ ಬೆಳೆಸಿಕೊಳ್ಳಬೇಕು ಎಂಬುರು ರೈತರ ಮುಖಂಡರ ಒತ್ತಾಸೆ.

ಧರ್ಮಪುರ ಪರ ತಿಪ್ಪಾರೆಡ್ಡಿ ಬ್ಯಾಟಿಂಗ್: ಧರ್ಮಪುರ ಹೋಬಳಿಯನ್ನು ತುಂಗಭದ್ರಾ ಹಿನ್ನೀರು ಯೋಜನೆಯಿಂದ ಕೈ ಬಿಟ್ಟಿರುವುದರ ಬಗ್ಗೆ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಅವರು ಗ್ರಾಮೀಣ ಅಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಗಮನ ಸೆಳೆದಿದ್ದು, ನೀರಾವರಿ ಸೌಲಭ್ಯ ವಂಚಿತ ಧರ್ಮಪುರವನ್ನು ಯೋಜನೆಯಲ್ಲಿ ಸೇರ್ಪಡೆ ಮಾಡುವಂತೆ ಮನವಿ ಮಾಡಿದ್ದಾರೆ.

ರೈತ ಮುಖಂಡ ಬೋರ್‌ವೆಲ್ ಈರಣ್ಣ ಹೇಳಿಕೆ: ಹಿರಿಯೂರು ತಾಲೂಕಿನಲ್ಲಿ ಧರ್ಮಪುರ ಹೋಬಳಿ ಇದೆ ಎನ್ನುವುದು ಜನಪ್ರತಿನಿಧಿಗಳು ಮರೆತಿದ್ದಾರೆ. ಚಳ್ಳಕೆರೆ-ಮೊಳಕಾಲ್ಮೂರು ತಾಲೂಕಿಗೆ ಶೀಘ್ರ ಶಾಶ್ವತ ಕುಡಿವ ನೀರಿನ ಸೌಲಭ್ಯ ಸಿಗಲಿದೆ. ಆದರೆ, ಧರ್ಮಪುರಕ್ಕೆ ಯಾವುದೇ ನೀರಾವರಿ ಸೌಲಭ್ಯ ಇಲ್ಲ, ಇನ್ನಾದರು ಜನಪ್ರತಿನಿಧಿಗಳು ಗಮನ ಹರಿಸಬೇಕು.

ದಲಿತ ಮುಖಂಡ ಚಿದಾನಂದ್ ಖಂಡೇನಹಳ್ಳಿ ಹೇಳಿಕೆ: ಹಿರಿಯೂರು ತಾಲೂಕಿನಲ್ಲಿ ಎರಡು ಜಲಾಶಯಗಳಿದ್ದರೂ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದೇವೆ. ನೀರಾವರಿ ವಿಚಾರದ ಬಗ್ಗೆ ನಮ್ಮ ಜನಪ್ರತಿನಿಧಿಗಳಿಗೆ ಜ್ಞಾನ ಇಲ್ಲದೇ ಇರುವುದು ದುರಂತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net