ಜಲಾಶಯದ ತಪ್ಪಲಲ್ಲಿದ್ರು ತಪ್ಪದ ಜಲ ಸಂಕಟ

HYR vvs 16
Published on

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ಸಮುದ್ರಕ್ಕೆ ನೆಂಟಸ್ತನ, ನೀರಿಗೆ ಬರ ಎನ್ನುವ ಮಾತಿನಂತೆ ತಾಲೂಕಿನ ಧರ್ಮಪುರ, ಐಮಂಗಲ ಹಾಗೂ ವಿವಿ ಪುರ ವ್ಯಾಪ್ತಿಯ ಹತ್ತಾರು ಗ್ರಾಮಗಳಲ್ಲಿ ಜನತೆ ಹನಿ ನೀರಿಗೂ ಪರಿತಪಿಸುವಂತಾಗಿದೆ.

ತಾಲೂಕಿನಲ್ಲಿ ಶತಮಾನದ ಹಿಂದೆ ಗಾಯತ್ರಿ ಹಾಗೂ ವಿವಿ ಸಾಗರ ಎರಡು ಜಲಾಶಯ ನಿರ್ಮಿಸಲಾಗಿದೆ. ಕೇವಲ ಅಚ್ಚುಕಟ್ಟು ಪ್ರದೇಶಕ್ಕೆ ಮಾತ್ರ ಇದರ ನೀರು ಸೀಮಿತವಾಗಿದ್ದು, ಧರ್ಮಪುರ-ಐಮಂಗಲ ಹೋಬಳಿಗೆ ಶಾಶ್ವತ ಕುಡಿವ ನೀರಿನ ಸೌಲಭ್ಯ ಗಗನ ಕುಸುಮವಾಗಿದೆ.

ವಿವಿ ಪುರ ಗ್ರಾಮದ ವ್ಯಾಪ್ತಿಯಲ್ಲಿ ವಿವಿ ಸಾಗರ ಜಲಾಶಯ ಇದ್ದರೂ ಸುತ್ತಮುತ್ತಲಿನ 11 ಗ್ರಾಮಗಳಿಗೆ ಶಾಶ್ವತ ಕುಡಿವ ನೀರಿನ ಸೌಲಭ್ಯ ಸಿಕ್ಕಿಲ್ಲ. ಸ್ಥಳೀಯರು ನಿರಂತರ ಹೋರಾಟ ನಡೆಸುತ್ತಿದ್ದು, ಸರ್ಕಾರ ಮತ್ತು ಜನಪ್ರತಿನಿಧಿಗಳ ಸ್ಪಂದನೆ ಮಾತ್ರ ಶೂನ್ಯ.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಧರ್ಮಪುರದ ಕೆರೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಫೀಡರ್ ನಾಲೆ ಯೋಜನೆ ಹಲವು ಬೇಡಿಕೆಯಾಗಿದ್ದು, ಇಲ್ಲಿಯವರೆಗೆ ಸಾಕಾರಗೊಂಡಿಲ್ಲ.

ಹೋಬಳಿ ವ್ಯಾಪ್ತಿಯಲ್ಲಿ ಅಂತರ್ಜಲ ಅಪಾಯದ ಮಟ್ಟ ತಲುಪಿದ್ದು, ರೈತರು ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ಸಾವಿರ ಅಡಿಯವರೆಗೆ ಬೋರ್‌ವೆಲ್ ಕೊರೆಸಿದರು ಹನಿ ನೀರು ಸಿಗುತ್ತಿಲ್ಲ.

ತುಂಗಾಭದ್ರ ಹಿನ್ನೀರು ಇಲ್ಲ: ಶಾಶ್ವತ ಕುಡಿವ ನೀರು ಕಲ್ಪಿಸಲು ಮೊಳಕಾಲ್ಮೂರು, ಚಳ್ಳಕೆರೆ, ಪರಶುರಾಮಪುರ, ಪಾವಗಡ ತಾಲೂಕಿಗೆ ತುಂಗಾಭದ್ರ ಹಿನ್ನೀರು ಯೋಜನೆ ಜಾರಿ ಮಾಡಲಾಗಿದೆ. ಧರ್ಮಪುರ ಹೋಬಳಿ ಗಡಿ ಭಾಗದಲ್ಲಿ ಈಗಾಗಲೇ ಪೈಪ್ ಅಳವಡಿಸಲಾಗುತ್ತಿದೆ. ಆದರೆ, ಇಲ್ಲಿನ ಜನರಿಗೆ ಆ ಸೌಲಭ್ಯ ಸಿಕ್ಕಿಲ್ಲ.

ಕನಸಾಗಿದೆ ಧರ್ಮಪುರ ಕೆರೆಗೆ ಭದ್ರೆ ನೀರು: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಧರ್ಮಪುರ ಕೆರೆ ಸೇರ್ಪಡೆಯಾಗಿದ್ದು, ತುಮಕೂರು ನಾಲೆ ವೈ ಜಂಕ್ಷನ್ 164 ನೇ ಕಿ.ಮೀ. ಬುಕ್ಕಾಪಟ್ಟಣದಿಂದ ಇಕ್ಕನೂರು-ಕೋಡಿಹಳ್ಳಿ-ಧರ್ಮಪುರ ಕೆರೆಗೆ ನೀರು ತುಂಬಿಸಲು ಟೆಂಡರ್ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಆದರೆ, ಇಲ್ಲಿಯವರೆಗೆ ಕೇವಲ 30 ಕಿಮೀ ಭೂ ಸ್ವಾಧೀನ ಮಾಡಲಾಗಿದ್ದು, ಸದ್ಯಕ್ಕೆ ಭದ್ರೆ ನೀರು ಧರ್ಮಪುರ ಕೆರೆಗೆ ಹರಿಯುವುದು ದೂರದ ಮಾತು.

ವಿವಿ ಸಾಗರ ಜಲಾಶಯದ ನೀರನ್ನು ವೇದಾವತಿ ನದಿ ಮೂಲಕ ಸುವರ್ಣಮುಖಿ ನದಿಗೆ ಹರಿಸಿ, ಹೂವಿನಹೊಳೆ ಗ್ರಾಮದ ಬಳಿ ಬ್ಯಾರೇಜ್ ನಿರ್ಮಿಸಿ ಪೈಪ್ ಲೈನ್ ಮೂಲಕ ಧರ್ಮಪುರ ಕೆರೆಗೆ ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಯೋಜನೆ ರೂಪಿಸಬಹುದು. ನೀರಾವರಿ ಇಲಾಖೆಯಲ್ಲಿ 10 ಕೋಟಿ ರೂ. ಅನುದಾನ ಲಭ್ಯವಿದೆ. ಈ ಯೋಜನೆಗೆ ಯಾವುದೇ ಅಡೆ-ತಡೆ ಎದುರಾಗುವುದಿಲ್ಲ ಎನ್ನುತಾರೆ ನೀರಾವರಿ ಇಲಾಖೆ ಅಧಿಕಾರಿಗಳು.

ಇಚ್ಛಾಶಕ್ತಿ ಪ್ರದರ್ಶಿಸಬೇಕು: ಚಳ್ಳಕೆರೆ-ಮೊಳಕಾಲ್ಮೂರು ತಾಲೂಕಿಗೆ ವಿವಿ ಸಾಗರ ಜಲಾಶಯದ ನೀರು ಹರಿಸಲು ಸಾಧ್ಯವಾದರೆ, ಧರ್ಮಪುರ ಕೆರೆಗೆ ನೀರು ಹರಿಸಲು ಅಸಾಧ್ಯವೇ? ಎಂದು ಜನರು ಪ್ರಶ್ನಿಸುತ್ತಿದ್ದು ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ರೈತರ ಶತಮಾನದ ಬೇಡಿಕೆ ಈಡೇರಿಸಲು ಪ್ರಮಾಣಿಕ ಪ್ರಯತ್ನ ನಡೆಸಬೇಕಾಗಿದೆ.

ತಾಪಂ ಸದಸ್ಯ ಕೆ.ಶಂಕರಮೂರ್ತಿ ಹೇಳಿಕೆ: ವಿವಿ ಸಾಗರದಿಂದ ವೇದಾವತಿ ನದಿಗೆ ನೀರು ಹರಿಸುತ್ತಿರುವುದು ಅವೈಜ್ಞಾನಿಕವಾಗಿದೆ, ಹಿರಿಯೂರು-ಚಳ್ಳಕೆರೆ ಗಡಿಯಲ್ಲಿ ಇಲ್ಲಿಯವರೆಗೆ ಗೇಜ್ ಅಳವಡಿಸಿಲ್ಲ. ತಾಲೂಕಿನ ಸಮಗ್ರ ನೀರಾವರಿ ಸೌಲಭ್ಯಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಲು ಎಲ್ಲ ಜನಪ್ರತಿನಿಧಿಗಳು ಸಾಮೂಹಿಕ ರಾಜೀನಾಮೆ ನೀಡಿ, ತಾಲೂಕಿನ ಬಗ್ಗೆ ತಮ್ಮ ಬದ್ಧತೆ ಪ್ರದರ್ಶಿಸಬೇಕು.

ನೀರಾವರಿ ಹೋರಾಟಗಾರ ಎ.ಉಮೇಶ್ ವಿವಿ ಪುರ ಹೇಳಿಕೆ: ವಿವಿ ಸಾಗರ ಜಲಾಶಯದ ಸುತ್ತಮುತ್ತಲಿನ 11 ಗ್ರಾಮಗಳಿಗೆ ಶಾಶ್ವತ ಕುಡಿವ ನೀರಿನ ಸೌಲಭ್ಯ ಕಲ್ಪಿಸಲು ಸಾಧ್ಯವಾಗದೇ ಇರುವುದು ದುರಂತ. ಮನವಿಗೆ, ಹೋರಾಟಕ್ಕೆ ಮನ್ನಣೆ ದೊರೆತಿಲ್ಲ. ಲಾಕ್‌ಡೌನ್ ತೆರವಾದ ಬಳಿಕ ವಿವಿ ಪುರದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net