

ಹಿರಿಯೂರು: ದೇಶದ ಭವ್ಯ ಪರಂಪರೆ, ಸಂವಿಧಾನ ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ 18ನೇ ವಾರ್ಡ್ ಜಯನಗರ ಪಾರ್ಕ್‌ನಲ್ಲಿ ನಗರಸಭೆ ಭಾನುವಾರ ಆಯೋಜಿಸಿದ್ದ ನನ್ನ ಮಣ್ಣು-ನನ್ನ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಭದ್ರತೆ, ಜನರ ಸುರಕ್ಷತೆಗಾಗಿ ಹೋರಾಡಿದ ವೀರ ಯೋಧರ ಗೌರವಾರ್ಥ ಈ ಅಭಿಯಾನ ನಡೆಸಲಾಗುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕರು ಅಭಿಯಾನದಲ್ಲಿ ಭಾಗವಹಿಸಿ ಸೈನಿಕರನ್ನು ಗೌರವಿಸಬೇಕು ಎಂದರು.
ದೇಶದ ಜನತೆ ಶಾಂತಿ-ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ನಮ್ಮ ದೇಶದ ಹೆಮ್ಮೆಯ ಯೋಧರು. ಇಂದಿನ ಯುವ ಜನತೆ ದೇಶದ ಇತಿಹಾಸ, ಸಂವಿಧಾನದ ಆಶಯ, ಮಾನವೀಯ ಮೌಲ್ಯಗಳನ್ನು ಅರಿತು, ದೇಶದ ಉಜ್ವಲ ಭವಿಷ್ಯಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.
ಯೋಧರಾದ ಸೈಯದ್ ಶಾಮುದ್ದೀನ್, ಮಲ್ಲಿಕಾರ್ಜುನ್ ಅವರ ಕುಟುಂಬ, ಸಮಾಜ ಸೇವಕಿ ಶಶಿಕಲಾ ರವಿಶಂಕರ್, ಸ್ವಾತಂತ್ರ್ಯ ಹೋರಾಟಗಾರರು, ನಿವೃತ್ತ ಸೈನಿಕ ಮುದ್ದಲಿಂಗಪ್ಪ ಅವರನ್ನು ಗೌರವಿಸಲಾಯಿತು.
ನಗರಸಭೆ ಪೌರಾಯುಕ್ತ ಎಚ್.ಮಹಂತೇಶ್, ಸದಸ್ಯರಾದ ಪ್ರಕಾಶ್, ಶಿವರಂಜನಿ, ಮಮತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಜಿಪಂ ಮಾಜಿ ಸದಸ್ಯ ಆರ್.ನಾಗೇಂದ್ರನಾಯ್ಕ, ಕವಿತಾ, ಅನಿಲ್ ಕುಮಾರ್, ರಹಮತ್ ಉನ್ನೀಸಾ, ಪ್ರಸನ್ನ ಕುಮಾರ್, ಸುನೀಲ್, ಮೀನಾಕ್ಷಿ, ಸಂಧ್ಯಾ, ಅಶೋಕ್ ಇತರರಿದ್ದರು.