ಕರೊನಾ ಭೀತಿಗೆ ಜಾತ್ರೋತ್ಸವ ರದ್ದು

HYR jatre 26
Published on

ಹಿರಿಯೂರು: ಕರೊನಾ ವೈರಸ್ ಎಫೆಕ್ಟ್ ಧಾರ್ಮಿಕ ಆಚರಣೆಗಳಿಗೂ ತಟ್ಟಿದ್ದು, ತಾಲೂಕಿನ ಪ್ರಮುಖ ಜಾತ್ರೆಗಳನ್ನು ರದ್ದುಪಡಿಸಲಾಗಿದೆ.

ಏಪ್ರಿಲ್ ತಿಂಗಳು ನಡೆಯಬೇಕಿದ್ದ ವದ್ದಿಕೆರೆ ಸಿದ್ದಪ್ಪ, ಅಂಬಲಗೆರೆ ರಂಗನಾಥ ಸ್ವಾಮಿ, ಹರ್ತಿಕೋಟೆ ವೀರಭದ್ರಸ್ವಾಮಿ, ಖಂಡೇನಹಳ್ಳಿ ಶನೈಶ್ಚರಸ್ವಾಮಿ ಜಾತ್ರೋತ್ಸವ ಆಚರಣೆಗೆ ಬ್ರೇಕ್ ಬಿದ್ದಿದೆ.

ಜಾತ್ರೆಗೆ ಹೆಚ್ಚಿನ ಭಕ್ತರು ಓಡಾಡುವುದರಿಂದ ಕರೊನಾ ವೈರಸ್ ಹರಡುವ ಸಂಭವವಿದ್ದು, ಜನರ ಆರೋಗ್ಯದ ಹಿತ ದೃಷ್ಟಿಯಿಂದ ಧಾರ್ಮಿಕ ಆಚರಣೆ ರದ್ದು ಮಾಡಿರುವುದನ್ನು ಭಕ್ತರು ಸ್ವಾಗತಿಸಿದ್ದಾರೆ.

ತಾಲೂಕಿನ ಇತಿಹಾಸದಲ್ಲಿ ಮೊದಲ ಬಾರಿಗೆ ಸಾಂಕ್ರಾಮಿಕ ರೋಗ ಭೀತಿಯಿಂದ ಜಾತ್ರೋತ್ಸವ ರದ್ದುಪಡಿಸಲಾಗಿದ್ದು, ಪ್ರಮುಖ ದೇಗುಲಗಳಲ್ಲಿ ಈಗಾಗಲೇ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಶ್ರೀ ತೇರುಮಲ್ಲೇಶ್ವರ ಸ್ವಾಮಿ, ರಾಜಾ ದುರ್ಗಾ ಪರಮೇಶ್ವರಿ, ಊರಬಾಗಿಲ ಆಂಜನೇಯ ಸ್ವಾಮಿ, ಹಾರನಕಣಿವೆ ರಂಗನಾಥ ಸ್ವಾಮಿ ದೇಗುಲಗಳನ್ನು ಮುಚ್ಚಲಾಗಿದೆ.

ಮಾದಿಗ ಆದಿಜಾಂಬವ ಮಠದ ಪೀಠಾಧ್ಯಕ್ಷರಾದ ಶ್ರೀ ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿಕೆ: ಜನರ ಆರೋಗ್ಯ ದೃಷ್ಟಿಯಿಂದ ಜಾತ್ರೋತ್ಸವಗಳನ್ನು ರದ್ದುಪಡಿಸಿರುವುದು ಸ್ವಾಗತಾರ್ಹ. ಧಾರ್ಮಿಕ ಕಾರ್ಯಕ್ರಮಗಳ ಮೂಲ ಉದ್ದೇಶವೇ ಜನರ ನೆಮ್ಮದಿ, ಆರೋಗ್ಯ ಆಗಿದೆ. ಭಾವನೆಗಳಿಗಿಂತ ಜನರ ಸಹಜ ಬದುಕಿಗೆ ಹೆಚ್ಚಿನ ಬೆಲೆ ಕೊಡಬೇಕು. ಈ ಕಾರಣಕ್ಕೆ ತಾಲೂಕಿನ ಜನತೆ ತಮ್ಮೂರಿನಲ್ಲಿ ಜಾತ್ರೆ ಸೇರಿ ವಿವಿಧ ಧಾರ್ಮಿಕ ಕಾರ್ಯಗಳನ್ನು ರದ್ದು ಪಡಿಸಿರುವುದು ಉತ್ತಮ ನಡೆ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net