

ಹಿರಿಯೂರು: ನಗರದಲ್ಲಿ ಪ್ರತಿ ವರ್ಷ ಮಘಾ ಮಾಸದ ಶುಕ್ಲ ಪಕ್ಷದ ರೇವತಿ ನಕ್ಷತ್ರದಲ್ಲಿ ಆರಂಭಗೊಳ್ಳುವ ಹದಿನಾರು ದಿನಗಳ ತೇರುಮಲ್ಲೇಶ್ವರ ಜಾತ್ರೆ ಕೇಂದ್ರಾಕರ್ಷಣೆ ಬ್ರಹ್ಮ ರಥೋತ್ಸವ.
ಜಾತ್ರೆ ಸಂದರ್ಭದಲ್ಲಿ ಪ್ರತಿ ದಿನ ಸಂಜೆ ಗಿಳಿ, ಗಂಡಭೇರುಂಡ, ನವಿಲು, ಸಿಂಹ, ಸರ್ಪ, ಅಶ್ವ, ಬಸವ ವಾಹನೋತ್ಸವ ಜರುಗುತ್ತದೆ. ರಥೋತ್ಸವದ ದಿನ ಶ್ರೀಸ್ವಾಮಿಗೆ ಮಹಾಭಿಷೇಕ ತರುವಾಯ ವೇದಾವತಿ ನದಿಯಲ್ಲಿ ಶಿವಧನಸ್ಸಿಗೆ ಗಂಗಾಸ್ನಾನ ಮಾಡಲಾಗುತ್ತದೆ. ಆನಂತರ ಮಘಾ ನಕ್ಷತ್ರದಲ್ಲಿ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.
ಜಾತ್ರೋತ್ಸವದಲ್ಲಿ 10-15 ಸಾವಿರಕ್ಕೂ ಅಧಿಕ ಭಕ್ತರು ಜಾತಿ, ಧರ್ಮ, ಭೇದ ಮರೆತು ಪಾಲ್ಗೊಳ್ಳುತ್ತಾರೆ. ಇದೇ ದಿನ ಚಂದ್ರ ಮೌಳೇಶ್ವರ ಸ್ವಾಮಿ, ಉಮಾ ಮಹೇಶ್ವರ ಹಾಗೂ ತೇರುಮಲ್ಲೇಶ್ವರ ಸ್ವಾಮಿ ರಥೋತ್ಸವ ಜರುಗುವುದು ಬಹು ವಿಶೇಷತೆಯಾಗಿದೆ.
ಜಾತ್ರೆ ಆರಂಭಗೊಂಡು ಕಂಕಣ ಧಾರಣೆ, ವಿಸರ್ಜನೆವರೆಗೆ ಭಕ್ತರ ಮನೆಗಳಲ್ಲಿ ಹುರಿದ, ಕರಿದ ಆಹಾರ, ಮಾಂಸದ ಊಟ ಸೇವನೆ ನಿಷೇಧಿಸಲಾಗುತ್ತದೆ.
ಆಕರ್ಷಕ ತೇರು: ನಾಲ್ಕು ಕಲ್ಲಿನ ಗಾಲಿಗಳ 20 ಅಡಿ ಎತ್ತರಕ್ಕೆ ಬೃಹತ್ ಗೋಳಾಕಾರದ ಗೋಪುರ ನಿರ್ಮಿಸಿ ವಿವಿಧ ಬಣ್ಣಗಳ ವಸ್ತ್ರಗಳಿಂದ ಅಲಂಕರಿಸಲಾಗುತ್ತದೆ. ಶ್ರೀಸ್ವಾಮಿಯನ್ನು ಹೂವುಗಳಿಂದ ಸಿಂಗರಿಸಿ, ರಥದಲ್ಲಿ ಪ್ರತಿಷ್ಠಾಪಿಸಿ ರಥ ಬೀದಿಯಲ್ಲಿ ಕರೆ ತರುವ ದೃಶ್ಯ ಆಸ್ತಿಕರ ಮನಸ್ಸಿನಲ್ಲಿ ಧನ್ಯತೆಯ ಭಾವ ಮೂಡಿಸುತ್ತದೆ.
ಜಾತ್ರೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಸಾಮೂಹಿಕ ವಿವಾಹ, ಕುಸ್ತಿ ಪಂದ್ಯ, ಕ್ರೀಡಾಕೂಟಗಳು, ಅನ್ನಸಂತರ್ಪಣೆ, ಮುಕ್ತಿ ಬಾವುಟ ಹರಾಜು ಹಾಕುವುದು ವಿಶೇಷ.
ಉತ್ಸವದ ಕೊನೆಯಲ್ಲಿ ರಥಾವರೋಹಣ, ಕಲ್ಲು ಕಂಬ ದೀಪೋತ್ಸವ, ಕಂಕಣ ವಿಸರ್ಜನೆ, ಪಲ್ಲಕ್ಕಿ ಉತ್ಸವ ಇತರ ಧಾರ್ಮಿಕ ಕಾರ್ಯ ಏರ್ಪಡಿಸಲಾಗುತ್ತದೆ.