

ಹಿರಿಯೂರು: ಇಲ್ಲಿನ ನಗರಸಭೆ ಕಟ್ಟಡ ನಿರ್ಮಾಣ ಪೂರ್ಣಗೊಂಡು ಒಂದು ವರ್ಷವೇ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ !
ನಗರಸಭೆ ಆವರಣದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಹಳೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿವಿಧ ಶಾಖೆಗಳು ಪಕ್ಕದ ಲೋಕೋಪಯೋಗಿ ಇಲಾಖೆ ಕಟ್ಟಡ ಆಶ್ರಯಿಸಿದ್ದು, ಆಡಳಿತ-ವಿರೋಧ ಪಕ್ಷದ ರಾಜಕೀಯ ಪ್ರತಿಷ್ಠೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೊಸ ಕಟ್ಟಡ ಪ್ರವೇಶಿಸಲು ಕಾಲ ಕೂಡಿ ಬಂದಿಲ್ಲ.
ನಗರಸಭೆಯಲ್ಲಿ ವಿವಿಧ ಸೇವೆ ಪಡೆಯಲು ಬರುವ ಸಾರ್ವಜನಿಕರಿಗೆ ಸಕಾಲಕ್ಕೆ ಅಧಿಕಾರಿಗಳು ಲಭ್ಯವಾಗುತ್ತಿಲ್ಲ, ಸೇವೆಯೂ ದೊರೆಯುತ್ತಿಲ್ಲ ಎನ್ನುವ ದೂರು ಕೇಳಿ ಬಂದಿದೆ.
ವಿಶೇಷ ಅನುದಾನ: ಪೀಠೋಪಕರಣ, ಲಿಫ್ಟ್ ಅಳವಡಿಸಲು ಶಾಸಕರ ನಿಧಿಯಿಂದ 1.50 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು, ತಾಂತ್ರಿಕ ಒಪ್ಪಿಗೆ ಪಡೆಯಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲು ಕಡತ ಸಿದ್ಧಪಡಿಸಲಾಗಿದೆ.
ಹಿರಿಯೂರಿನ ಜನಸಂಖ್ಯೆ 70,000 ದಾಟಿದ್ದು, ಹೊಸ ಬಡಾವಣೆ, ಕೈಗಾರಿಕೆ ಅಭಿವೃದ್ಧಿ, ವಾಣಿಜ್ಯ-ವ್ಯಾಪಾರ ವಹಿವಾಟು ಹೆಚ್ಚಿದ್ದು, ನಗರಸಭೆಯಲ್ಲಿ ವಿವಿಧ ಸೇವೆ ಪಡೆಯಲು ನಿತ್ಯ ನೂರಾರು ಜನ ಭೇಟಿ ನೀಡುತ್ತಿದ್ದಾರೆ. ಪಾರದರ್ಶಕ ಆಡಳಿತ, ತ್ವರಿತ ಸೇವೆ, ಜನ ಸ್ನೇಹಿ ಆಡಳಿತಕ್ಕೆ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಬೇಕಾಗಿದೆ.