ಗುರು ತಿಪ್ಪೇರುದ್ರಸ್ವಾಮಿ ಬ್ರಹ್ಮ ರಥೋತ್ಸವ

HYR thippeswamy jatre 13
Published on

ಹಿರಿಯೂರು: ತಾಲೂಕಿನ ಖಂಡೇನಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಉತ್ಸವದ ಅಂಗವಾಗಿ ಗಂಗಾಪೂಜೆ, ಕಲಶ ಸ್ಥಾಪನೆ, ನವಗ್ರಹ ಆವಾಹನೆ, ಅರ್ಚನೆ, ನವಗ್ರಾಹದಿ ಮೃತ್ಯುಂಜಯ ಹೋಮ, ಬಲಿ ಪ್ರಧಾನ ಪೂರ್ಣಾಹುತಿ, ವಿಶೇಷ ಪುಷ್ಪಾಲಂಕಾರ ಸುಮಂಗಲೆಯರಿಂದ ಆರತಿ ಸೇವೆ ನಡೆದವು.

ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಲಂಕರಿಸಿದ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಹೂವಿನ ರಥದಲ್ಲಿ ಪ್ರತಿಷ್ಠಾಪಿಸಿ ಸಂಜೆ 5 ಗಂಟೆಗೆ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಭಕ್ತರು ತೇರನ್ನು ಊರ ಬಾಗಿಲವರೆಗೆ ಎಳೆದರು. ರಥಕ್ಕೆ ಬಾಳೆಹಣ್ಣು, ಮಂಡಕ್ಕಿ ಸೂರು ಬೆಲ್ಲ ತೂರಿದರು. ಹರಕೆ ಹೊತ್ತ ಭಕ್ತರು ದೇವಸ್ಥಾನದ ಮುಂದಿನ ಅಗ್ನಿಕುಂಡಕ್ಕೆ ಕೊಬ್ಬರಿ, ಶೇಂಗಾ, ಧೂಪ ಸಮರ್ಪಿಸಿದರು.

ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳು ಜರುಗಿದವು. ಗ್ರಾಮದ ಕಲಾ ತಂಡದವರಿಂದ ಕಿನ್ನರ ಗೊಂಬೆ ಕುಣಿತ ಜಾತ್ರೆಯಲ್ಲಿ ನೆರೆದಿದ್ದ ಭಕ್ತರ ಆಕರ್ಷಣೆಯಾಗಿತ್ತು. ಡೊಳ್ಳು ಕುಣಿತ, ವೀರಗಾಸೆ, ಭಜನೆ ಇತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ದೇವಸ್ಥಾನದ ಸೇವಾ ಸಮಿತಿ, ಗ್ರಾಮಸ್ಥರ ಸಹಯೋಗದೊಂದಿಗೆ ಭಕ್ತರಿಗೆ ಅನ್ನಸಂತರ್ಪಣೆ, ಪ್ರಸಾದ, ಪಾನಕ ವಿತರಿಸಲಾಯಿತು. ಗ್ರಾಪಂ, ತಾಪಂ ಸದಸ್ಯರು, ಮಾಜಿ ಅಧ್ಯಕ್ಷರು, ದೇವಸ್ಥಾನ ಸೇವಾ ಸಮಿತಿ, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net