

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಅಕ್ರಮ-ಸಕ್ರಮ ಯೋಜನೆಯ ಸದುಪಯೋಗ ಪಡೆಯಲು ರೈತರಿಗೆ ಮತ್ತೆ ಬೆಸ್ಕಾಂ ಅವಕಾಶ ಕಲ್ಪಿಸಿದೆ.
ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಮತ್ತು ರೈತರಿಗೆ ಗುಣಮಟ್ಟದ ವಿದ್ಯುತ್ ಒದಗಿಸಲು ಇಂಧನ ಇಲಾಖೆ ಬೆಸ್ಕಾಂ ವಿಭಾಗದಲ್ಲಿ ಅಕ್ರಮ-ಸಕ್ರಮ ಯೋಜನೆ ಅನುಷ್ಠಾನಗೊಳಿಸಿದ್ದು, ರೈತರಿಗೆ ಅನುಕೂಲವಾಗಿದೆ.
ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಸರ್ಕಾರದ ಆದೇಶದಂತೆ ದಂಡ ಶುಲ್ಕ, ಭದ್ರತಾ ಹಾಗೂ ಮಾಪಕ ಠೇವಣಿ ಪಾವತಿಸಿದ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು.
ಹಿರಿಯೂರು ತಾಲೂಕಿನಲ್ಲಿ 2289 ರೈತರು ನೋಂದಣಿ ಮಾಡಿಕೊಂಡಿದ್ದು, 1972 ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಮತ್ತೆ ನೋಂದಣಿಗೆ ಅವಕಾಶ: ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಯೋಜನೆ ಅವಧಿ ಪೂರ್ಣಗೊಂಡ ಕಾರಣ ಯೋಜನೆ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ರೈತರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಅಕ್ರಮ ಸಂಪರ್ಕಗಳನ್ನು ಹೊಸ ಸಂಪರ್ಕದಂತೆ ನೋಂದಣಿ ಮಾಡಿಕೊಳ್ಳಲು ಮತ್ತೆ ಅವಕಾಶ ನೀಡಲಾಗಿದೆ. ಅಕ್ರಮ ಸಂಪರ್ಕಗಳ ಸಕ್ರಮಕ್ಕೆ 19500 ರೂ. ಗಳನ್ನು ಮಾತ್ರ ರೈತರು ಪಾವತಿಸಬೇಕಾಗುತ್ತದೆ.
ಹಣ ವಸೂಲಿ ಮಾಡಿದ್ರೆ ಎಚ್ಚರಿಕೆ: ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಂಬ, ಟಿಸಿ ಹಾಕಿಸಿಕೊಡುತ್ತೇವೆ ಎಂದು ಕೆಲವರು ರೈತರಿಂದ ಸಾವಿರಾರು ರೂ. ವಸೂಲಿ ಮಾಡಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ರೈತರು ಯಾರಿಗೂ ಹಣ ಕೊಡಬಾರದು. ಸರ್ಕಾರ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಿದೆ. 2020ರ ನವೆಂಬರ್ 14ಕ್ಕೆ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆ ಇದ್ದು, ವಿದ್ಯುತ್ ಲೈನ್ ಸಂಪರ್ಕದ ವೇಳೆ ರೈತರ ಸಹಕಾರ ಅಗತ್ಯ ಎಂದು ತಿಳಿಸಿರುವ ಟ್ರಾನ್ಸ್ ಗ್ಲೋಬಲ್ ಪವರ್ ಕಂಪನಿ ನಿರ್ದೇಶಕ ಸಂಜು ಸುರೇಶ್, ಹಣ ವಸೂಲಿ ಕಂಡು ಬಂದರೆ ರೈತರು ಮೊ.ನಂ: 9008036303 ಇಲ್ಲಿಗೆ ದೂರು ನೀಡಬಹುದು ಎಂದು ತಿಳಿಸಿದ್ದಾರೆ.
ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್
ಕುಲ್ಮೆ ಮಹಮ್ಮದ್ ಸಾಹೇಬ್
ಅಕ್ರಮ ಸಕ್ರಮ ಯೋಜನೆ ರೈತರಿಗೆ ವರದಾನವಾಗಿದ್ದು, ಕೃಷಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ. ರೈತರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು.
ಇಂಧನ ಇಲಾಖೆ ಮಹಾತ್ವಕಾಂಕ್ಷೆ ಯೋಜನೆಯಿಂದ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ. ವೋಲ್ಟೆಜ್ ಸಮಸ್ಯೆ, ಟಿಸಿ ಸುಟ್ಟು ಹೋಗುವುದು, ಸೋರಿಕೆ ಮತ್ತಿತರ ತಾಂತ್ರಿಕ ತೊಂದರೆಗಳಿಂದ ರೈತರಿಗೆ ಮುಕ್ತಿ ದೊರಕಲಿದೆ.
ತಿಮ್ಮರಾಯಪ್ಪ ಬೆಸ್ಕಾಂ ಎಇಇ