

ಹಿರಿಯೂರು: ನವ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಆದರ್ಶ ಚಿಂತನೆಗಳನ್ನು ಇಂದಿನ ಯುವ ಸಮೂಹ ಮೈಗೂಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ರಾಜಕಾರಣದಲ್ಲಿ ಹೊಸ ಅಲೆ ಎಬ್ಬಿಸಿ, 40ನೇ ವಯಸ್ಸಿನಲ್ಲಿ ದೇಶದ ಪ್ರಧಾನಿ ಆಗುವ ಮೂಲಕ ಮಾಹಿತಿ ತಂತ್ರಜ್ಞಾನ, ಶಿಕ್ಷಣದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದು ಭಾರತವನ್ನು ಶಕ್ತಿ ಶಾಲಿ ರಾಷ್ಟ್ರವನ್ನಾಗಿ ಅಭಿವೃದ್ಧಿ ಪಡಿಸುವ ಮೂಲಕ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು ಎಂದು ತಿಳಿಸಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಗಾಂಧಿ ಕುಟುಂಬದ ತ್ಯಾಗವನ್ನು ನಾವು ಸದಾ ಸ್ಮರಿಸಿಕೊಳ್ಳಬೇಕು, ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದರೆ ಮಾತ್ರ ಸರ್ವರಿಗೂ ಸಾಮಾಜಿಕ ನ್ಯಾಯ ಸಿಗಲಿದೆ ಎಂದರು.
ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ದೇಶದಲ್ಲಿ ಸ್ವಚ್ಛ ಭಾರತ ಪರಿಕಲ್ಪನೆ ಜಾರಿಗೊಳಿಸಿದ ಕೀರ್ತಿ ದಿ.ರಾಜೀವ್ ಗಾಂಧಿ ಅವರಿಗೆ ಸಲ್ಲಬೇಕು ಎಂದು ತಿಳಿಸಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಜಿಪಂ ಸದಸ್ಯರಾದ ಶಶಿಕಲಾ ಸುರೇಶ್ ಬಾಬು, ಆರ್.ನಾಗೇಂದ್ರನಾಯ್ಕ, ಯೋಗೀಶ್ ಬಾಬು, ಪಾಪಣ್ಣ, ಗೀತಾ, ಮುಖಂಡರಾದ ಖಾದಿ ರಮೇಶ್, ಹರೀಶ್, ಜಿ.ದಾದಾಪೀರ್, ಕೆಪಿಸಿಸಿ ಸದಸ್ಯ ಸುರೇಶ್ ಬಾಬು, ನಗರಸಭೆ ಸದಸ್ಯರಾದ ಅಜಯ್ ಕುಮಾರ್, ಪ್ರಕಾಶ್, ಗುಂಡೇಶ್ ಕುಮಾರ್, ಈರಲಿಂಗೇಗೌಡ, ಪಿಕಾರ್ಪ್ ಬ್ಯಾಂಕ್ ನಿರ್ದೇಶಕ ಪಿ.ಎಸ್.ಸಾದತ್ ವುಲ್ಲಾ, ಜ್ಞಾನೇಶ್, ತಾಪಂ ಸದಸ್ಯರಾದ ಚಂದ್ರಪ್ಪ, ಓಂಕಾರಪ್ಪ ಇತರರಿದ್ದರು.