

ಹಿರಿಯೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮಾ ಅವರು ಸರ್ವಾಧಿಕಾರಿ ಧೋರಣೆ ಹೊಂದಿದ್ದು, ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಎದುರಾಗಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯರು ಆರೋಪಿಸಿದರು.
ತಾಪಂ ಅಧ್ಯಕ್ಷೆ ಲಕ್ಷಿ ್ಮೀದೇವಿ ಅಧ್ಯಕ್ಷತೆಯಲ್ಲಿ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಸೋಮವಾರ ಜರುಗಿದ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸದಸ್ಯರು ಸಿಇಒ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ಸರ್ಕಾರದ ಯೋಜನೆಗಳು ಕೆಲವರಿಗೆ ಮಾತ್ರ ಸೀಮಿತ ಆಗುತ್ತಿವೆ. ಕಾನೂನು ಬದ್ಧ್ದವಾಗಿ ಮಾತನಾಡಿದರೆ ಪೊಲೀಸ್ ಭಯ ತೋರಿಸುತ್ತಾರೆ. ಜನಪ್ರತಿನಿಧಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ದೂರಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಮನಸ್ಸಿಗೆ ಬಂದಂತೆ ಕಾರ್ಯಾ ದೇಶ ನೀಡಿದ್ದಾರೆ. ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಹಿನ್ನೆಡೆಗೆ ಸಿಇಒ ನೇರ ಹೊಣೆ ಎಂದು ಆಪಾದಿಸಿದರು.
ವಿವಿ ಸಾಗರಕ್ಕೆ ಭದ್ರಾ ನೀರು ಹರಿದಿದ್ದರಿಂದ ತಾಲೂಕಿನ ರೈತರು ತೋಟಗಾರಿಕೆ ಬೆಳೆಗಳತ್ತ ಮುಖ ಮಾಡಿದ್ದಾರೆ. ರೈತರಿಗೆ ಸರ್ಕಾರಿ ಸೌಲಭ್ಯ, ಬೆಳೆಗಳ ಬಗ್ಗೆ ಮಾಹಿತಿ ನೀಡಬೇಕೆಂದು ಯಶವಂತ ರಾಜ್ ತಿಳಿಸಿದರು.
ರೈತರು ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆ ಅಭಿವೃದ್ಧಿ ಪಡಿಸಿದ್ದಾರೆ. ನಾಲ್ಕು ವರ್ಷವಾದರೂ ಸಪ್ಲೈ ಬಿಲ್ ಬಂದಿಲ್ಲ. ಈ ಬಗ್ಗೆ ನೀವು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸದಸ್ಯರು ತೋಟಗಾರಿಕೆ ಅಧಿಕಾರಿ ತೋಟಯ್ಯ ಅವರನ್ನು ಪ್ರಶ್ನಿಸಿದರು.
ಉಪಾಧ್ಯಕ್ಷೆ ಜಯಲಕ್ಷ್ಮಿ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತರಾಯಪ್ಪ, ಸದಸ್ಯರಾದ ಓಂಕಾರಪ್ಪ, ಜಿ.ಕಲ್ಪನಾ, ವನಿತಾ, ಪುಷ್ಪಾ, ಲಕ್ಷ್ಮೀದೇವಿ, ತಿಪ್ಪಮ್ಮ, ಕರಿಯಪ್ಪ, ಚಂದ್ರಕಲಾ, ಇಒ ಹನುಮಂತಪ್ಪ, ಬೆಸ್ಕಾಂ ಎಇಇ ತಿಮ್ಮರಾಯಪ್ಪ, ಬಿಇಒ ರಾಮಯ್ಯ, ಅಕ್ಷರ ದಾಸೋಹ ಅಧಿಕಾರಿ ಎಲ್.ನಾಗರಾಜಾಚಾರ್ ಇತರರಿದ್ದರು.
ಅಧಿಕಾರಿಗಳ ಗೈರು: ಸಣ್ಣ ನೀರಾವರಿ ಇಲಾಖೆ, ನಿರ್ಮಿತಿ ಕೇಂದ್ರದ ಅಧಿಕಾರಿಗಳು ನಿರಂತರ ಗೈರಾಗುತ್ತಿದ್ದು ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಇಒ ಹನುಮಂತಪ್ಪ, ಈಗಾಗಲೇ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಅವರಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಹು ಗ್ರಾಮ ಕುಡಿವ ನೀರು ಯೋಜನೆಗೆ ಗ್ರಹಣ: ಬಹುಗ್ರಾಮ ಕುಡಿವ ನೀರಿನ ಯೋಜನೆ ಕೆಲಸ ಪೂರ್ಣಗೊಂಡರೂ ಕುಡಿವ ನೀರು ಲಭ್ಯವಾಗಿಲ್ಲ. ಇಂದು-ನಾಳೆ ಎಂದು ಹಾರಿಕೆ ಉತ್ತರ ನೀಡಲಾಗುತ್ತಿದೆ ಎಂದು ಶಂಕರಮೂರ್ತಿ, ಯಶವಂತ್‌ರಾಜ್ ದೂರಿದರು. ಪ್ರತಿಕ್ರಿಯಿಸಿದ ಎಇಇ ರಾಮಚಂದ್ರನಾಯ್ಕ, ಐಮಂಗಲ ಹೋಬಳಿ ವ್ಯಾಪ್ತಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಸದ್ಯಕ್ಕೆ 33 ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಪಶು ಇಲಾಖೆಯಲ್ಲಿ ಅವ್ಯವಹಾರ: ಪಶು ಇಲಾಖೆ ಸೌಲಭ್ಯಗಳ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ ತಾಲೂಕಿನಲ್ಲಿ 2 ಖಾಸಗಿ ಗೋಶಾಲೆ ಕಾರ್ಯ ನಿರ್ವಹಿಸುತ್ತಿದ್ದು, ಇವುಗಳ ನಿರ್ವಹಣೆಗೆ ಪ್ರತಿ ವರ್ಷ 50 ಲಕ್ಷ ರೂ. ಅನುದಾನ ಲಭ್ಯವಾಗುತ್ತಿದೆ. ಇದರಲ್ಲಿ ಅವ್ಯವಹಾರ ನಡೆಯುತ್ತಿದೆ. ಸಮಗ್ರ ತನಿಖೆ ನಡೆಸಬೇಕು ಎಂದು ಎಂದು ಸದಸ್ಯರು ಒತ್ತಾಯಿಸಿದರು.