

ಉಡುಪಿ: ಹಿರಿಯಡ್ಕ ಮಹತೋಭಾರ ವೀರಭದ್ರ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಮಾ.3ರಿಂದ 5ರವರೆಗೆ ಕೃಷಿ ಮೇಳ ಹಾಗೂ ಸಾಂಸ್ಕೃತಿಕ ವೈಭವ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಾವರ ಕೃಷಿ ಡಿಪ್ಲೊಮಾ ಕಾಲೇಜು ಪ್ರಾಂಶುಪಾಲ ಡಾ.ಕೆ.ವಿ. ಸುಧೀರ್ ಕಾಮತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾ.3ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಕಾಪು ಶಾಸಕ ಲಾಲಾಜಿ ಮೆಂಡನ್ ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಲಿದ್ದಾರೆ. ಕಾಂಪ್ಕೋ ಅಧ್ಯಕ್ಷ ರೈತರನ್ನು ಸನ್ಮಾನಿಸಲಿದ್ದಾರೆ. ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮ,ತ್ತು ತೋಟಗಾರಿಕಾ ವಿವಿ ಕುಲಪತಿ ಡಾ.ಆರ್.ಸಿ. ಜಗದೀಶ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಪಂ ಸಿಇಒ ಪ್ರಸನ್ನ, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್, ರಮೇಶ್ ನಾಯಕ್, ಅಶೋಕ್ ಕುಮಾರ್ ಶೆಟ್ಟಿ, ಲತಾ ಎಸ್. ಮೊದಲಾದವರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ಬಳಿಕ ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಲಿದೆ.
ಮಾ.4ರಂದು ತೋಟಗಾರಿಕಾ ಬೆಳೆಗಳ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ. ಮಾ.5ರಂದು ಮಧ್ಯಾಹ್ನ 2 ರಿಂದ 5ರವರೆಗೆ ಸ್ಥಳೀಯ ಖಾದ್ಯ ತಯಾರಿಕೆ ಪ್ರದರ್ಶನ, ಸ್ಪರ್ಧೆ ಮತ್ತು ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ. ಸಾಯಂಕಾಲ 5ಕ್ಕೆ ಸಮಾರೋಪದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ವಸಂತ ಶೆಟ್ಟಿ ಕುದಿ, ಕುಂಬಾರ ಗುಡಿ ಕೈಗಾರಿಕಾ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಬೊಮ್ಮರ ಬೆಟ್ಟು ಗ್ರಾಪಂ ಅಧ್ಯಕ್ಷ ಸುರೇಶ್ ನಾಯಕ್, ಕೃಷಿಮೇಳ ಸಮಿತಿ ಗೌರವಾಧ್ಯಕ್ಷ ಪಳ್ಳಿ ನಟರಾಜ್ ಹೆಗ್ಡೆ, ಬ್ರಹ್ಮಾವರ ಕೃಷಿಕೇಂದ್ರ ಹಿರಿಯ ವಿಜ್ಞಾನಿ ಡಾ. ಬಿ. ಧನಂಜಯ, ಡಾ. ಶ್ರೀನಿವಾಸ ಎಚ್. ಉಪಸ್ಥಿತರಿದ್ದರು.