

ಹಿರೀಸಾವೆ : ಲೋಕಸಭಾ ಚುನಾವಣೆ ನಿಮಿತ್ತ ಹೋಬಳಿ ವ್ಯಾಪ್ತಿಯಲ್ಲಿ ತೆರೆದಿದ್ದ ಮತ ಕೇಂದ್ರಗಳಲ್ಲಿ ಪೊಲೀಸ್ ಬಿಗಿಭದ್ರತೆಯೊಂದಿಗೆ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಹೋಬಳಿಯ ಎಲ್ಲ ಮತ ಕೇಂದ್ರಗಳಿಗೆ ನಿಯೋಜನೆಗೊಂಡಿದ್ದ ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ ಯಂತ್ರಗಳೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗುರುವಾರ ಸಂಜೆ ಸುಮಾರಿನಲ್ಲಿಯೇ ತಲುಪಿದ್ದರು.
ಶುಕ್ರವಾರ ಮುಂಜಾನೆಯೆ ಮತದಾನ ಪ್ರಕ್ರಿಯೆಗೆ ಸಕಲ ಸಿದ್ದತೆ ನಡೆಸಿಕೊಂಡಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಾರಂಭವಾಯಿತು. ಮೊದಲಿಗೆ ಮತದಾನ ಚುರುಕುಗೊಂಡಿತ್ತಾದರೂ 10.30ರ ನಂತರ ಬಿಸಿಲಿನ ಝುಳ ಹೆಚ್ಚಿದ ಪರಿಣಾಮ ಮಂದಗತಿಯಲ್ಲಿ ಸಾಗಿತು.
ಮಿತಿಮೀರಿದ ಬಿಸಿಲಿನ ತಾಪಕ್ಕೆ ಬಸವಣಿದು ಮನೆಯಿಂದ ಜನತೆ ಹೊರ ಬರಲು ಹಿಂಜರಿದ ಪರಿಣಾಮ ಸಂಜೆ ಸುಮಾರಿನ ವರೆಗೂ ಮತಗಟ್ಟೆ ಕೇಂದ್ರದ ಬಳಿಗೆ ಬೆರಳೆಣಿಕೆಯಷ್ಟು ಮತದಾರರು ಆಗಮಿಸಿದ್ದು ಕಂಡುಬಂದಿತು. ಆದರೆ 3.30 ರ ನಂತರ ಮತ್ತೆ ಮತದಾನ ಚುರುಕುಗೊಂಡಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಲಲಿತ್ ರಾಘವ್ ಹಿರೀಸಾವೆಯ ಮತಘಟ್ಟೆ ಸಂಖ್ಯೆ 122 ರಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಆದಿಚುಂಚನಗಿರಿ ಶಾಖಾಮಠ ಕಬ್ಬಳಿ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಕಬ್ಬಳಿ ಗ್ರಾಮದ ಮತಗಟ್ಟೆ 31ರಲ್ಲಿ ಮತ ಚಲಾಯಿಸಿದರು. ಸಂಜೆ 4 ಗಂಟೆ ವೇಳೆಗೆ ಶೇ.60 ರಷ್ಟು ಮತದಾನವಾಗಿತ್ತು. ಹೋಬಳಿ ವ್ಯಾಪ್ತಿಯ ಯಾವುದೇ ಮತ ಕೇಂದ್ರಗಳಲ್ಲಿ ಯಾವುದೇ ತಾಂತ್ರಿಕ ದೋಷ, ಸಮಸ್ಯೆಗಳು ಕಂಡುಬರಲಿಲ್ಲ. ಶಾಂತಿಯುತವಾಗಿ ಪ್ರಕ್ರಿಯೆ ನಡೆದದ್ದು ವಿಶೇಷ.