

ಸಕಲೇಶಪುರ: ಎತ್ತಿನಹೊಳೆ ಯೋಜನೆ ಆರಂಭಿಸುವಾಗ ಅಧಿಕಾರಿಗಳು ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಯೋಜನೆ ಉದ್ಘಾಟನೆಗೊಂಡರೂ ಗ್ರಾಮಕ್ಕೆ ಯಾವುದೇ ಮೂಲಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸಿ ತಾಲೂಕಿನ ಹಿರಿದನಹಳ್ಳಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಹಿರಿದನಹಳ್ಳಿ ಗ್ರಾಮದಲ್ಲಿ ಸೇರಿದ ಗ್ರಾಮಸ್ಥರು ಎತ್ತಿನಹೊಳೆ ಯೋಜನೆ ಹಾಗೂ ಯೋಜನೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಆರು ವರ್ಷಗಳ ಹಿಂದೆ ಎತ್ತಿನಹೊಳೆ ಯೋಜನೆ ಇದೇ ಗ್ರಾಮದಲ್ಲಿ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಎತ್ತಿನಹೊಳೆ ಯೋಜನೆಯ ಅಧಿಕಾರಿಗಳು ಗ್ರಾಮಕ್ಕೆ ಮೂಲಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಗ್ರಾಮಕ್ಕೆ ಯಾವುದೇ ಮೂಲಸೌಕರ್ಯಗಳನ್ನು ಒದಗಿಸಿಲ್ಲ. ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಆದರೆ ಇದನ್ನು ಯೋಜನೆಯ ಕಾಮಗಾರಿ ಅನುಕೂಲಕ್ಕಾಗಿ ಮಾಡಲಾಗಿದೆ. ಗ್ರಾಮದಲ್ಲಿ ಹಲವು ಒಳ ರಸ್ತೆಗಳಿವೆ. ಆದರೆ ಯಾವುದೆ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿಲ್ಲ. ಗ್ರಾಮಸ್ಥರು ಮಳೆಗಾಲದಲ್ಲಿ ಮನೆಗಳಿಗೆ ಹೋಗಲು ಹರಸಾಹಸ ಮಾಡಬೇಕಾಗಿದೆ ಎಂದ ತಮ್ಮ ಅಳಲು ತೋಡಿಕೊಂಡರು.
ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಇಲ್ಲಿಂದ ಬರಪೀಡಿತ ಪ್ರದೇಶಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ ಮಲೆನಾಡು ಭಾಗವಾದ ನಮ್ಮ ಗ್ರಾಮದ ನಿವಾಸಿಗಳಿಗೆ ನೀರಿನ ಸೌಕರ್ಯ ಇಲ್ಲ. ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತು ಸಂದರ್ಭಗಳಲ್ಲಿ ಯಾರಾದರೂ ಅನಾರೋಗ್ಯ ಪೀಡಿತರಾದಾಗ ಆಂಬುಲೆನ್ಸ್‌ಗಳನ್ನು ಕರೆಸಲು ನೆಟ್‌ವರ್ಕ್ ಇಲ್ಲದೆ ಪರದಾಡುವಂತಾಗಿದೆ. ಹೊರ ಊರಿನಿಂದ ಗ್ರಾಮಕ್ಕೆ ಬರುವವರು ಮನೆಗಳನ್ನು ಹುಡುಕಲು ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ತಮ್ಮ ಸಮಸ್ಯೆ ಹೇಳಿಕೊಂಡರು.
ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಯವರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ಹೋಗುವುದರಿಂದ ಇತರ ವಾಹನ ಸವಾರರಿಗೆ ಸಂಚರಿಸಲು ಅನನುಕೂಲವಾಗುತ್ತಿದೆ. ಈ ಭಾಗದಲ್ಲಿ ಕಾಡಾನೆಗಳ ಕಾಟವು ವಿಪರೀತವಾಗಿದೆ. ಆದರೂ ಯಾವುದೆ ಮೂಲಸೌಕರ್ಯಗಳನ್ನು ಒದಗಿಸಿರುವುದಿಲ್ಲ. ಈ ಕುರಿತು ಎತ್ತಿನಹೊಳೆ ಯೋಜನೆಯ ಅಭಿಯಂತರರು ಸೇರಿದಂತೆ ಇತರರನ್ನು ಕೇಳಿದರೆ ಉಡಾಫೆಯಿಂದ ವರ್ತಿಸುತ್ತಾರೆ. ಇನ್ನೆರಡು ದಿನಗಳಲ್ಲಿ ಅಧಿಕಾರಿಗಳು ಸ್ಥಳಕ್ಕೆ ಬಂದು ನೀಡಿದ್ದ ಭರವಸೆಗಳನ್ನು ಈಡೇರಿಸದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಜೇಗೌಡ, ಹೂವಣ್ಣ ಗೌಡ, ಮೋಹನ್ ಮುಂತಾದವರು ಹಾಜರಿದ್ದರು.