

ಕುಷ್ಟಗಿ: ಹಿರೇನಂದಿಹಾಳ ಗ್ರಾಮದ ಸಹಿಪ್ರಾ ಶಾಲೆಯ ಸಹ ಶಿಕ್ಷಕಿ ಕೆ.ಆರ್.ಸುಧಾಮಣಿ ಶಾಲೆಯ ಅಭಿವೃದ್ಧಿಗೆ 1ಲಕ್ಷ ರೂ. ದೇಣಿಗೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಶಾಲಾ ಮಕ್ಕಳ ಕಾರಾಣದಿಂದಲೇ ಬದುಕಿಗೆ ಅನ್ನ ದೊರೆಯುತ್ತಿದೆ. ಮಕ್ಕಳ ಕಲಿಕೆಗೆ ನೆರವಾಗಲು ನನ್ನಿಂದಾದ ಪ್ರಯತ್ನ ಮಾಡಿರುವೆ. ಸ್ವಂತ ಕಾರ್ಯಕ್ಕೆ ಪಡೆಯುವ ರಜೆಗೆ ನೀಡುವ ಸಂಬಳ ನನ್ನದಲ್ಲ ಎಂಬುದು ನನ್ನ ಅಭಿಪ್ರಾಯ. 38 ವರ್ಷದ ಸೇವಾ ಅವಧಿಯಲ್ಲಿನ ರಜಾ ದಿನಗಳ ವೇತನ ಸಂಗ್ರಹಿಸಿ ಶಾಲೆಯ ಅಭಿವೃದ್ಧಿಗೆ ನೀಡಿರುವೆ. ತಂದೆಯವರು ವೃತ್ತಿಗೆ ಸೇರುವ ಮುನ್ನ ಆದಷ್ಟು ಪ್ರಾಮಾಣಿಕವಾಗಿರು ಹಾಗೂ ಶಾಲೆಯ ಅಭಿವೃದ್ಧಿಯಲ್ಲಿ ನಿನ್ನ ಪಾತ್ರವೂ ಇರಲಿ ಎಂದಿದ್ದರು. ಅವರ ಮಾತನ್ನು ಪಾಲಿಸಿರುವೆ ಎಂದು ಶಿಕ್ಷಕಿ ಸುಧಾಮಣಿ ಸಂತಸ ವ್ಯಕ್ತಪಡಿಸಿದರು.
ಶಿಕ್ಷಕಿಯ ಕಾರ್ಯ ಮೆಚ್ಚಿ ಅವರನ್ನು ಸನ್ಮಾನಿಸಿ ಗೌರವಿಸಿದ ಬಿಇಒ ಸುರೇಂದ್ರ ಕಾಂಬಳೆ, ಶಿಕ್ಷಕಿ ಸುಧಾಮಣಿ ಅವರ ಕಾರ್ಯ ಇಡೀ ಶಿಕ್ಷಕ ಸಮುದಾಯದ ಘನತೆ ಹೆಚ್ಚಿಸಿದೆ. ಅವರ ಕಾರ್ಯ ಮಾದರಿಯಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಕಾರ್ಯದರ್ಶಿ ಬೀರಪ್ಪ ಕುರಿ, ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಲಕ್ಕಲಕಟ್ಟಿ, ಎಸ್ಡಿಎಂಸಿ ಅಧ್ಯಕ್ಷ ಈರಪ್ಪ, ಶಾಲೆಯ ಭೂದಾನಿ ಹನುಮಂತಗೌಡ್ರ, ಬಿಆರ್‌ಪಿ ಡಾ.ಜೀವನಸಾಬ ವಾಲಿಕಾರ, ಸಿಆರ್‌ಪಿ ಶರಣಪ್ಪ ಉಪ್ಪಾರ, ಶಿಕ್ಷಕರಾದ ಹನುಮಪ್ಪ ಹೊರಪೇಟೆ, ಸೋಮಲಿಂಗಪ್ಪ ಗುರಿಕಾರ ಇತರರಿದ್ದರು.