ಹೋರಾಟಗಳು ಹೇಗಿರಬೇಕು ಎಂದು ಯುವಜನರಿಗೆ ಪಾಠ ಹೇಳಿದ ಎಸ್.ಆರ್. ಹಿರೇಮಠ

28 Dwd 1 (S.R.Hiremath)
Published on

ಮೈಸೂರು: ಹೋರಾಟದಲ್ಲಿ ಸಮಸ್ಯೆ, ಸವಾಲುಗಳು ಎದುರಾಗುವುದು ಸಹಜ. ಹೋರಾಟದಲ್ಲಿ ಯಶಸ್ಸು ಕಾಣಬೇಕಾದರೆ ಯಾವುದೇ ಕಾರಣಕ್ಕೂ ಹೋರಾಟವನ್ನು ಅವಸರದಲ್ಲಿ ಪ್ರಾರಂಭಿಸಬಾರದು ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಯುವಜನರಿಗೆ ಕಿವಿಮಾತು ಹೇಳಿದರು.

ಅಭಿರುಚಿ ಪ್ರಕಾಶನ, ಅಂಗಳ ಸಾಹಿತ್ಯ ಬಳಗ ವತಿಯಿಂದ ನಗರದ ಮಾನಸಗಂಗೋತ್ರಿಯ ಇಎಂಎಂಆರ್‌ಸಿ ಸಭಾಂಗಣದಲ್ಲಿ ರೂಪಾ ಹಾಸನ ರಚನೆಯ ‘ಮಹಾಸಂಗ್ರಾಮಿ’ ಕೃತಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಹೋರಾಟ ಮಾಡುವ ವಿಷಯದ ಕುರಿತು ಅಧ್ಯಯನ ಮಾಡಬೇಕು. ಹಾಗಂತ ಪಿಎಚ್‌ಡಿ ರೀತಿಯಲ್ಲಿ ಅಧ್ಯಯನ ನಡೆಸುವ ಅವಶ್ಯಕತೆ ಇಲ್ಲ. ಆದರೆ, ಹೋರಾಟದ ವಿಷಯದ ಕುರಿತು ಮಾಹಿತಿ ಸಂಗ್ರಹಿಸಿ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.

ಯಾವುದೇ ಕಾರಣಕ್ಕೂ ಎಕಾಂಗಿಯಾಗಿ ಹೋರಾಟ ಮಾಡಬಾರದು. ಏಕಾಂಗಿಯಾಗಿ ಹೋರಾಟ ನಡೆಸುವ ಅವಶ್ಯಕತೆ ಏನಿದೆ? ಏಕಾಂಗಿಯಾಗಿ ಹೋರಾಟ ನಡೆಸಿ ಪಡೆಯುವಂತಹದ್ದು ಏನಿಲ್ಲ. ಹಾಗಾಗಿ ಸಮಾಜ ಪರಿವರ್ತನೆ ವಿಚಾರದಲ್ಲಿ ಸಾಮೂಹಿಕ ಹೋರಾಟದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಆರ್‌ಟಿಐಯಿಂದ ಪಡೆಯುವ ಮಾಹಿತಿಯಿಂದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ಹೋರಾಟದಲ್ಲಿ ಯಾರೊಂದಿಗೂ ರಾಜಿಯಾಗದೆ ಹೋರಾಟ ನಡೆಸಬೇಕು. ಸದುದ್ದೇಶದಿಂದ ನಡೆಸುವ ಹೋರಾಟದಲ್ಲಿ ಎಡರು ತೊಡರುಗಳು ಎದುರಾಗುವುದು ಸಹಜ. ಅದನ್ನು ಎದುರಿಸಲು ಒಂದು ತಂಡದ ಅವಶ್ಯಕತೆ ಇದೆ ಎಂದರು.

ಭೂಗಳ್ಳರು ವಿಧಾನಸಭೆ ಒಳಗೂ ಹೊರಗೂ ಇದ್ದಾರೆ. ಎಲ್ಲ ಪಕ್ಷಗಳಲ್ಲೂ ಭೂಗಳ್ಳರು ಇದ್ದಾರೆ. ಹಾಗಾಗಿ ದೇಶದ ಆಡಳಿತವನ್ನು ಉತ್ತಮ ಜನರಿಗೆ ನೀಡಿದರೆ ಭೂಗಳ್ಳತನಕ್ಕೆ ಕಡಿವಾಣ ಹಾಕಬಹುದು. ಬಳ್ಳಾರಿ ಗಣಿಗಾರಿಕೆಯಲ್ಲಿ ಹಲವರು ಜೈಲು ಸೇರಲು ಸಂವಿಧಾನ ಹಾಗೂ ಕಾನೂನು ಸಹಕಾರಿಯಾಯಿತು. ಹಾಗಾಗಿ ಸಂವಿಧಾನ ನಮಗೆ ನೀಡಿರುವ ಹಕ್ಕನ್ನು ಸರಿಯಾಗಿ ಚಲಾಯಿಸಬೇಕು. ಹಣ, ಹೆಂಡಕ್ಕೆ ಮತಗಳನ್ನು ಮಾರಿಕೊಳ್ಳಬಾರದು. ನಮ್ಮ ಹಕ್ಕನ್ನು ಸರಿಯಾಗಿ ಚಲಾಯಿಸದ ಹಿನ್ನೆಲೆಯಲ್ಲಿ ಜೈಲಿನಲ್ಲಿ ಇರಬೇಕಾದವರು ನಾಗರಿಕ ಸಮಾಜದಲ್ಲಿ ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಸದರನ್ನು ಅಮಾನತು ಮಾಡಿರುವುದು ಯಾವ ರೀತಿಯ ಪ್ರಜ್ರಾಭುತ್ವ? ನಾವು ಹೇಳಿದ ರೀತಿಯಲ್ಲಿ ಬರೆಯಬೇಕು ಎಂದು ಮಾಧ್ಯಮಗಳಿಗೆ ನಿರ್ದೇಶನ ನೀಡುವುದು ಎಷ್ಟರ ಮಟ್ಟಿಗೆ ಸರಿ? ದೇಶದಲ್ಲಿ ಗಂಭೀರ ಪರಿಸ್ಥಿತಿ ಇದ್ದು, ಇದರ ವಿರುದ್ಧ ಹೋರಾಟ ನಡೆಸುವ ಅವಶ್ಯಕತೆ ಇದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net