

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಹಿರೇಮಲ್ಲೂರ ಈಶ್ವರನ್ ಮಾನವೀಯ ಗುಣವುಳ್ಳ ಜಗತ್ತಿನ ಸರ್ವಶ್ರೇಷ್ಠ ಸಾಮಾಜಿಕ ಮಾನವಶಾಸ್ತ್ರರಾಗಿದ್ದರು. ಅವರ ಬದುಕು ಸಂಘರ್ಷದ ಬದುಕಾಗಿತ್ತು ಎಂದು ಬೆಂಗಳೂರು ಆಕಾಶವಾಣಿ ನಿಲಯ ನಿರ್ದೇಶಕ ಡಾ. ಬಸವರಾಜ ಸಾದರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಹಿರೇಮಲ್ಲೂರ ಈಶ್ವರನ್ ಸ್ಮರಣೆ ನಿಮಿತ್ತ ಭಾನುವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಹಿರೇಮಲ್ಲೂರ ಈಶ್ವರನ್ ಜೀವನ-ಸಾಧನೆ ಕುರಿತು ಮಾತನಾಡಿದರು.
ಕರ್ನಾಟಕ ಕಟ್ಟಿದವರು ಉತ್ತರ ಕರ್ನಾಟಕದವರು ಎಂಬುದನ್ನು ಮರೆತಂದಾಗಿದೆ. ಈ ಭಾಗದ ರಾಜಕಾರಣಿಗಳಿಗೆ ಈ ಅರಿವು ಇಲ್ಲದ ಕಾರಣ ಇಲ್ಲಿನ ಸಾಧಕರಿಗೆ ಗೌರವ, ಸ್ಥಾನ-ಮಾನ ಸಿಗದಂತಾಗಿದೆ. ಡಾ. ಹಿರೇಮಲ್ಲೂರ ತಮ್ಮ ಹೋರಾಟದ ಮೂಲಕವೇ ಸಾಧನೆ ಶಿಖರವನ್ನೇರುವ ಛಲ ಹೊಂದಿದ್ದರು ಎಂದರು.
ತಮ್ಮ ಜೀವನದಲ್ಲಿ ಆಗಿ ಹೋದ ಅನೇಕ ಸಂಘರ್ಷಗಳ ಕುರಿತು ವಲಸೆಗಾರ ಕನ್ನಡಿಗನ ಕಥೆ ಎಂಬ ಗ್ರಂಥದಲ್ಲಿ ದಾಖಲಿಸಿದ್ದಾರೆ. ತಾವು ವಾಸವಿದ್ದ ಧಾರವಾಡದ ಮನೆಯನ್ನು ಗದುಗಿನ ತೋಂಟದಾರ್ಯ ಮಠಕ್ಕೆ ದಾನ ನೀಡಿದರು. ಇಂದು ಅದೇ ಸ್ಥಳದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ವಿದ್ಯಾ ಸಂಸ್ಥೆ ಡಾ. ಹಿರೇಮಲ್ಲೂರ ಈಶ್ವರನ್ ಕಾಲೇಜು ಬೆಳೆದು ನಿಂತಿದೆ. ಡಾ. ಹಿರೇಮಲ್ಲೂರ ಅವರದು ಚಲನಶೀಲ ವ್ಯಕ್ತಿತ್ವದ ಗುಣ. ಅವರೊಬ್ಬ ಜನಮಾನಸದ ವ್ಯಕ್ತಿ ಎಂದರು.
ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ಪ್ರಾಚಾರ್ಯ ಶಶಿಧರ ತೋಡಕರ್ ದತ್ತಿ ಆಶಯ ಕುರಿತು ಮಾತನಾಡಿದರು. ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಡಾ. ಮಹೇಶ ಹೊರಕೇರಿ, ವೆಂಕಟೇಶ ಮಾಚಕನೂರ, ಸಿ.ಯು. ಬೆಳ್ಳಕ್ಕಿ, ನಿಂಗಣ್ಣ ಕುಂಟಿ, ಸದಾಶಿವ ಜನಗೌಡರ, ಡಾ. ಶಿವಾನಂದ ಟವಳಿ, ಡಾ. ಚನ್ನಪ್ಪ ಅಂಗಡಿ, ಇತರರು ಇದ್ದರು.
ಡಾ. ಶ್ರೀಶೈಲ ಹುದ್ದಾರ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.