ಹಿರೇಮಲ್ಲೂರ ಈಶ್ವರನ್ ಸೇವೆ ಸ್ಮರಣೀಯ

3 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಹಿರೇಮಲ್ಲೂರ ಈಶ್ವರನ್ ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ವಿಜ್ಞಾನಿಯಾಗಿದ್ದರು. ಅವರು ಪ್ರಾಮಾಣಿಕ ಹೋರಾಟದ ಮೂಲಕ ಬದುಕು ಕಟ್ಟಿಕೊಂಡ ಮಹಾನ್ ಮಾನವಶಾಸ್ತ್ರಜ್ಞ ಎಂದು ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯದರ್ಶಿ ಜಿ.ಸಿ. ತಲ್ಲೂರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗುರುವಾರ ಏರ್ಪಡಿಸಿದ್ದ ಡಾ. ಹಿರೇಮಲ್ಲೂರ ಈಶ್ವರನ್ ಜನ್ಮ ಶತಮಾನೋತ್ಸವದ ಸ್ಮರಣೆ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಹಿರೇಮಲ್ಲೂರ ಈಶ್ವರನ್ ಅವರದ್ದು ನೇರನುಡಿ, ಹಠಮಾರಿ ಸ್ವಭಾವ. ಯಾರ ಹಂಗಿಗೂ ಒಳಗಾಗದೇ ತಮ್ಮ ಇಷ್ಟದಂತೆ ಬದುಕಿದವರು. ಬಡತನದ ಕುಲುಮೆಯಲ್ಲಿ ಬೆಂದ ಅವರು, ಸಾಧಿಸಬೇಕೆಂಬ ಛಲದೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದ ಇತಿಹಾಸ ಪುರುಷರು. ವಿಶ್ವ ವಿದ್ಯಾಲಯಗಳಲ್ಲಿ ನಡೆಯುತ್ತಿದ್ದ ತಾರತಮ್ಯ ಖಂಡಿಸಿದ್ದಕ್ಕೆ ಬದುಕಿನುದ್ದಕ್ಕೂ ವಲಸಿಗರಾಗಿ ಅನಿಶ್ಚಿತ ತಿರುಗಾಟ ಮಾಡಬೇಕಾಯಿತು. ಸಮಾಜಶಾಸ್ತ್ರ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅವರ ಸೇವೆ ಸ್ಮರಣೀಯ ಎಂದರು.
ಗದಗ ತೋಂಟದಾರ್ಯ ವಿದ್ಯಾಪೀಠದ ಪ್ರೊ. ಶಿವಾನಂದ ಪಟ್ಟಣಶೆಟ್ಟಿ ಮಾತನಾಡಿ, ಹಿರೇಮಲ್ಲೂರರ ಜೀವನ ಸಮಾಜಕ್ಕೆ ಅನುಕರಣೀಯ, ಆದರ್ಶ. ತಾವು ವಾಸವಿದ್ದ ಬೆಲೆಬಾಳುವ ಮನೆಯನ್ನು ಗದಗ ತೋಂಟದಾರ್ಯ ಮಠಕ್ಕೆ ದಾನವಾಗಿ ನೀಡಿದ್ದರಿಂದ ಇಂದು ಅವರ ಹೆಸರಿನಲ್ಲೇ ಪ್ರತಿಷ್ಠಿತ ಕಾಲೇಜು ಸ್ಥಾಪಿಸಿ ಅನೇಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಶಶಿಧರ ತೋಡಕರ ದತ್ತಿ ಆಶಯ ಕುರಿತು ಮಾತನಾಡಿದರು. ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಡಾ. ಜಿನದತ್ತ ಹಡಗಲಿ, ಡಾ. ಶಿವಾನಂದ ಶೆಟ್ಟರ್, ಡಾ. ವೀರಣ್ಣ ರಾಜೂರ, ಎಂ.ಎಂ. ಚಿಕ್ಕಮಠ, ಜಿ.ಎ. ಕಲ್ಲೂರ, ಸಿ.ಎಸ್.ಮಾಳವಾಡ, ಕೆ.ಎಂ. ಅಂಗಡಿ, ನಿಂಗಣ್ಣ ಕುಂಟಿ, ಸಿ.ಯು. ಬೆಳ್ಳಕ್ಕಿ, ಡಾ. ಬಿ.ಎಲ್. ಪಾಟೀಲ, ಬಿ.ಡಿ. ಪಾಟೀಲ, ಬಿ.ಮಾರುತಿ, ಜಯಾ ಅಂಗಡಿ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ವೀರಣ್ಣ ಒಡ್ಡಿನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net