

ಮೈಸೂರು: ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಅವರ ಬಗ್ಗೆ ಹೇಳುವುದು ಕಷ್ಟ, ಅವರೊಂದು ಬೆರಗು. ಸಾಧನೆಯಲ್ಲಿ ಅತ್ಯಂತ ಎತ್ತರದ ವ್ಯಕ್ತಿ ಎಂದು ಶಿಕ್ಷಣತಜ್ಞ ಗುರುರಾಜ ಕರಜಗಿ ಬಣ್ಣಿಸಿದರು.
ಮುದ್ದುರಾಮ ಪ್ರತಿಷ್ಠಾನ ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮುದ್ದುರಾಮ ಪ್ರಶಸ್ತಿ ಮತ್ತು ಮುದ್ದುರಾಮ ಪುರಸ್ಕಾರ ಪ್ರದಾನ ಹಾಗೂ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಸಾಮಾನ್ಯವಾಗಿ ನಮ್ಮ ಜತೆಗಿರುವವರು ಎಷ್ಟೊಂದು ಎತ್ತರದ ವ್ಯಕ್ತಿ ಎಂದು ನಮಗೆ ಅರ್ಥವಾಗುವುದಿಲ್ಲ. ಅವರು ಎಷ್ಟೊಂದು ದೊಡ್ಡವರು ಎಂಬುದು ಗೊತ್ತಾಗಲು ಸ್ವಲ್ಪ ದಿನ ಬೇಕು. ಶ್ರೀ ರಾಮ ಇದ್ದಾಗ ಶ್ರೀರಾಮ ದೊಡ್ಡವನು ಎಂದು ಎಷ್ಟು ಜನರು ಅರ್ಥ ಮಾಡಿಕೊಂಡಿದ್ದರು? ಕೃಷ್ಣ ಇದ್ದಾಗ ಕೃಷ್ಣ ದೇವರು ಎಂದು ಎಷ್ಟು ಜನ ಅರ್ಥ ಮಾಡಿಕೊಂಡಿದ್ದರೋ ಗೊತ್ತಿಲ್ಲ. ಆದರೆ, ಕಾಲ ಕಳೆದ ಹಾಗೆ ವ್ಯಕ್ತಿತ್ವ ಮೇಲೆ ಎದ್ದು ಬರುತ್ತದೆ, ಆಗ ವ್ಯಕ್ತಿಯ ಹಿರಿಮೆ ಗೊತ್ತಾಗುತ್ತದೆ. ಅದೇ ರೀತಿ ಹಿರೇಮಗಳೂರು ಕಣ್ಣನ್ ತುಂಬ ಎತ್ತರದ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಎಂದರು.
ಕನ್ನಡದ ಪೂಜಾರಿ ಖ್ಯಾತಿಯ ವಾಗ್ಮಿ ಹಿರೇಮಗಳೂರು ಕಣ್ಣನ್ ಅವರಿಗೆ ಮುದ್ದುರಾಮ ಪ್ರಶಸ್ತಿ ಹಾಗೂ ಸಾಹಿತಿ ಎಂ.ಮುತ್ತುಸ್ವಾಮಿ ಅವರಿಗೆ ‘ಮುದ್ದುರಾಮ’ ಪುರಸ್ಕಾರ ಪ್ರದಾನ ಮಾಡಲಾಯಿತು. ಈ ಸಂದರ್ಭ ಹಿರೇಮಗಳೂರು ಕಣ್ಣನ್ ರಚನೆಯ ‘ಮುದ್ದುರಾಮ ಲಹರಿ’ ಮತ್ತು ಶ್ವೇತಾ ಪ್ರಕಾಶ್ ರಚನೆಯ ‘ಪದ್ಮ ಪಲ್ಲವ’ ಕೃತಿ ಲೋಕಾರ್ಪಣೆಗೊಂಡಿತು.
ಸುತ್ತೂರು ಶ್ರೀ ವೀರಸಿಂಹಾಸನ ಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ, ಹಿರಿಯ ಸಾಹಿತಿ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ, ಮುದ್ದುರಾಮ ಪ್ರತಿಷ್ಠಾನ ಅಧ್ಯಕ್ಷ ಕೆ.ಸಿ. ಶಿವಪ್ಪ, ಸಾಹಿತಿ ಶ್ವೇತಾ ಪ್ರಕಾಶ್ ಇದ್ದರು.