ಹಿರೇಲಿಂಗದಹಳ್ಳಿ ಕೆರೆ ಹಸ್ತಾಂತರ

Kere
Published on

ಹಾವೇರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾವೇರಿ ಘಟಕದ ವತಿಯಿಂದ ಕುರುಬಗೊಂಡ ಗ್ರಾಮ ಪಂಚಾಯಿತಿ ಮತ್ತು ಹಿರೇಲಿಂಗದಹಳ್ಳಿ ಕೆರೆ ಅಭಿವೃದ್ಧಿ ಸಮಿತಿ ಸಹಕಾರದೊಂದಿಗೆ 4 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಹಿರೇಲಿಂಗದಹಳ್ಳಿ ಗ್ರಾಮದ ನಾಗಕಟ್ಟೆಯ 776ನೇ ಕೆರೆಯನ್ನು ಜಿಲ್ಲಾಡಳಿತಕ್ಕೆ ಮಂಗಳವಾರ ಹಸ್ತಾಂತರಿಸಲಾಯಿತು.

ಹಿರೇಲಿಂಗದಹಳ್ಳಿಯ ನಾಗಕಟ್ಟೆ ಕೆರೆ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶಾಸಕ ಬಸವರಾಜ ಶಿವಣ್ಣನವರ ಕೆರೆಯ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು. ನಶಿಸಿ ಹೋಗುತ್ತಿರುವ ಕೆರೆಗಳನ್ನು ಡಾ.ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿ ಚಿಂತನೆಗಳಿಂದ ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಜತೆಗೆ ಕೃಷಿ ಅಭಿವೃದ್ಧಿಗೆ, ಸಾರ್ವಜನಿಕರು, ಪ್ರಾಣಿ ಪಕ್ಷಿಗಳಿಗೆ ನಿರಂತರವಾಗಿ ಉಪಯೋಗವಾಗುವಂಥ ಯೋಜನೆ ರೂಪಿಸಿರುವುದು ಶ್ಲಾಘನೀಯ ಎಂದರು.

ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಕಾರ್ಯಕ್ರಮ ಉದ್ಘಾಟಿಸಿ, ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ನೀರಿನ ಮಹತ್ವವನ್ನು ಅರಿತು ನೀರಿನ ಸಂರಕ್ಷಣೆಯ ಬಗ್ಗೆ ಆದ್ಯತೆ ನೀಡಬೇಕು. ನೀರಿನ ಮಹತ್ವವನ್ನು ತಿಳಿದುಕೊಂಡ ವೀರೇಂದ್ರ ಹೆಗ್ಗಡೆಯವರು ಹಾವೇರಿ ಜಿಲ್ಲೆಯಲ್ಲಿ ಈ ವರೆಗೆ 36 ಕೆರೆಗಳನ್ನು ಅಭಿವೃದ್ಧಿಪಡಿಸಿ ಲಕ್ಷಾಂತರ ಜನರಿಗೆ ಅನುಕೂಲ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಕೆರೆಗಳನ್ನು ಉಳಿಸಿ ಬೆಳೆಸಿ ಉಪಯೋಗ ಮಾಡಿಕೊಳ್ಳಬೇಕು. ಕೆರೆಯ ಅಂಗಳದ ಸುತ್ತಲೂ ಗಿಡ ನಾಟಿ ಮಾಡಿ ಕೆರೆ ಪರಿಸರವನ್ನು ಸ್ವಚ್ಛವಾಗಿ ಸುಂದರವಾಗಿ ಇಟ್ಟುಕೊಳ್ಳಬೇಕು ಎಂದರು.

ಕುರುಬಗೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಹಾವೇರಿ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ಪ್ರಾದೇಶಿಕ ನಿರ್ದೇಶಕ ದಯಾಶೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಕೆರೆಯ ದಾಖಲೆ ಹಸ್ತಾಂತರಿಸಿದರು.

ಗ್ರಾಪಂ ಉಪಾಧ್ಯಕ್ಷೆ ಸುಧಾ ನಿಂಗನಗೌಡ ಪಾಟೀಲ, ಜಿಲ್ಲಾ ಜನಜಾಗೃತಿ ಸದಸ್ಯ ರುದ್ರೇಶ ಚಿನ್ನಣ್ಣನವರ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗಪ್ಪ ಬಂಕಾಪುರ, ಉಪಾಧ್ಯಕ್ಷ ಮರಿಸಿದ್ದಪ್ಪ ಮಾಗೋಡ, ನಾಗಯ್ಯ, ನಿಂಗರಾಜ ಮಾಳಗಿ, ಮೇಲ್ವಿಚಾರಕಿ ದೀಪರಾಣಿ, ಶಿವಬಸಪ್ಪ ಮಾಗೋಡ ಇತರರು ಉಪಸ್ಥಿತರಿದ್ದರು.

ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಸ್ವಾಗತಿಸಿದರು. ತಾಲೂಕು ಯೋಜನಾಧಿಕಾರಿ ನಾರಾಯಣ ಗೊಂಡ ನಿರೂಪಿಸಿದರು. ಕೃಷಿ ಮೇಲ್ವಿಚಾರಕ ಬಸವರಾಜ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net