25 ಲಕ್ಷ ರೂ. ಹೂಡಿಕೆ ಮಾಡಿದರೆ 36 ಲಕ್ಷ ರೂ. ಕೊಡುವುದಾಗಿ ಹೇಳಿ ವಂಚನೆ; ಪ್ರಕರಣ ದಾಖಲು

Crime Logo
Published on

ಹಿರೇಕೆರೂರ: 25 ಲಕ್ಷ ರೂ. ಹೂಡಿಕೆ ಮಾಡಿದರೆ ಮರಳಿ 36 ಲಕ್ಷ ರೂ. ಬರುತ್ತದೆ ಎಂದು ನಂಬಿಸಿ ವ್ಯಕ್ತಿಯೊಬ್ಬನಿಂದ 25.98 ಲಕ್ಷ ರೂ. ಪಡೆದುಕೊಂಡು ಮೋಸ ಮಾಡಿದ 9 ಜನರ ವಿರುದ್ಧ ಇಲ್ಲಿಯ ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ತಾಲೂಕಿನ ಹಂಸಭಾವಿ ನಿವಾಸಿ ಸುಬ್ರಮಣ್ಯ ರೇವಣಕರ, ಶಿರಾಳಕೊಪ್ಪದ ನವೀನಕುಮಾರ ನಾಯ್ಕ, ಮಹ್ಮದ್ ಫೈಜಾನಖಾನ, ಉರ್ಜ ಅಲಿಖಾನ್, ಅನಿಲ ಜಾಧವ, ಶಂಶದ್ ಅಹ್ಮದ್, ನಜೀಮ್‌ಖಾನ, ಮುಖೇಶಕುಮಾರ ಮಾರ್‌ತ್ಯಾಗಿ, ಸುನೀಲ ಮನಗೂಳಿ ಸೇರಿ 9 ಜನರ ವಿರುದ್ಧ ದೂರು ದಾಖಲಾಗಿರುವುದು.
ನಗರದ ವ್ಯಾಪಾರಿ ಮಂಜುನಾಥ ಚಕ್ರಸಾಲಿ ದೂರು ನೀಡಿದವರು. ಆರೋಪಿ ಸುಬ್ರಮಣ್ಯ ರೇವಣಕರ ಆಕ್ಸಿಸ್ ಇ ಕಾರ್ಪ್ ಸಲೂಷನ್ಸ್ ಪ್ರೈ. ಲಿಮಿಡೆಟ್ ಹಾಗೂ ವೇದಿಕ್ ಆಯುರ್ ಕೇರ್ ಹೆಲ್ತ್ ಮತ್ತು ರೀಟೆಲ್ ಪ್ರೈ. ಲಿಮಿಡೆಟ್ ಕಂಪನಿಯ ಕರ್ನಾಟಕ ಟೀಂ ಲೀಡರ್ ನಿರ್ದೇಶಕನಾಗಿದ್ದನು. ಉಳಿದವರು ಇವರ ಬಳಿ ಕೆಲಸ ಮಾಡುತ್ತಿದ್ದಾರೆ.
ಇವರೆಲ್ಲರೂ ಸೇರಿ ನನಗೆ 25 ಲಕ್ಷ ರೂ.ಅನ್ನು ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ನಿಮಗೆ 36 ಲಕ್ಷ ರೂ. ಮರಳಿ ಬರಲಿದೆ ಎಂದು ಹೇಳಿ 25.98 ಲಕ್ಷ ರೂ.ಅನ್ನು ನನ್ನಿಂದ ಪಡೆದುಕೊಂಡಿದ್ದಾರೆ. ಆದರೆ, ಮರಳಿ 6.24 ಲಕ್ಷ ರೂ. ಮಾತ್ರ ಕೊಟ್ಟಿದ್ದು, ಕಂಪನಿಯಿಂದ ಬಂದ ಪೂರ್ಣ ಹಣ ಕೊಡದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net