

ಹಿರೇಕೆರೂರ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು, ಮಕ್ಕಳು ಓಡಾಡಲು ಭಯ ಪಡುವಂತಾಗಿದೆ. ನಾಯಿಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಸ್ಥಳಿಯರು ಪಟ್ಟಣ ಪಂಚಾಯಿತಿಗೆ ಒತ್ತಾಯಿಸಿದ್ದಾರೆ.
ಪಟ್ಟಣದ ಮಂಜುನಾಥ ನಗರ, ರಾಘವೇಂದ್ರ ಕಾಲನಿ, ಸ್ವಾಮಿ ವಿವೇಕಾನಂದ ನಗರ, ಬಸವೇಶ್ವರ ನಗರ, ಹೌಸಿಂಗ್ ಬೋರ್ಡ್, ಜನತಾ ಪ್ಲಾಟ್, ಮುಗಳಿಹಳ್ಳಿ ಪ್ಲಾಟ್, ಕಾಳಿದಾಸ ನಗರ, ದುರ್ಗಾ ನಗರ, ನಾಮದೇವ ಗಲ್ಲಿ, ಚೌಡೇಶ್ವರಿ ನಗರ ಸೇರಿ ವಿವಿಧ ಕಾಲನಿಗಳಲ್ಲಿ ಬೀದಿ ನಾಯಿಗಳು ಗುಂಪು ಗುಂಪಾಗಿ ಎಲ್ಲೆಂದರಲ್ಲಿ ಓಡಾಡುತ್ತಿವೆ. ಈ ನಾಯಿಗಳು ಹಂದಿ, ಮಂಗ, ಬೆಕ್ಕು, ಸಾಕು ನಾಯಿ ಮತ್ತು ಕೋಳಿಗಳ ಮೇಲೆ ದಾಳಿ ಮಾಡುತ್ತಿವೆ. ಈಗಾಗಲೇ ಅನೇಕ ಮಂಗಗಳು ಮತ್ತು ಹಂದಿಗಳು ಇವುಗಳ ದಾಳಿಯಿಂದ ಮೃತಪಟ್ಟಿವೆ. ರಸ್ತೆಯಲ್ಲಿ ನಡೆದು ಹೋಗುವ ಸಾರ್ವಜನಿಕರು, ಮಕ್ಕಳ ಮೇಲೂ ಎರಗುತ್ತಿವೆ. ಅಲ್ಲದೆ, ರಸ್ತೆಯಲ್ಲಿ ಬೈಕಿಗೆ ಅಡ್ಡ ಬರುತ್ತಿರುವುದರಿಂದ ಅನೇಕ ಬೈಕ್ ಸವಾರರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಎಲ್ಲ ಘಟನೆಗಳು ಗಮನಕ್ಕಿದ್ದರೂ ಪಟ್ಟಣ ಪಂಚಾಯಿತಿಯವರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ. ಕೂಡಲೇ ಪಪಂನವರು ನಾಯಿಗಳನ್ನು ಹಿಡಿದು ದೂರ ಪ್ರದೇಶದಲ್ಲಿ ಬಿಟ್ಟು ಬರಬೇಕು ಎಂದು ಪಟ್ಟಣದ ನಾಗರಿಕರು ಆಗ್ರಹಿಸಿದ್ದಾರೆ.
ಬೆಳಗ್ಗೆ ವಿಹಾರಕ್ಕೆ ತೆರಳುವ ಸಂದರ್ಭದಲ್ಲಿ ಗುಂಪಾಗಿ ಆಗಮಿಸುವ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಇದರಿಂದ ರಸ್ತೆಯಲ್ಲಿ ಓಡಾಡಲು ಭಯವಾಗುತ್ತಿದೆ. ಕೂಡಲೇ ಪಪಂನವರು ನಾಯಿಗಳನ್ನು ಹಿಡಿದು ಸ್ಥಳಾಂತರಿಸಬೇಕು.ಎನ್.ಎಸ್. ಚಿಕ್ಕನರಗುಂದಮಠ ನಿವೃತ್ತ ಶಿಕ್ಷಕ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಕುರಿತು ನನ್ನ ಗಮನಕ್ಕೆ ಬಂದಿದೆ. ಕೂಡಲೇ ನಾಯಿಗಳನ್ನು ಹಿಡಿಯುವ ನುರಿತ ತಂಡವನ್ನು ಕರೆಸಿ, ಅವುಗಳನ್ನು ಹಿಡಿದು ಸ್ಥಳಾಂತರಿಸಲಾಗುವುದು.ಪಂಪಾಪತಿ ನಾಯಕ ಪಪಂ ಮುಖ್ಯಾಧಿಕಾರಿ