ಮಾನವೀಯತೆ ಆಧಾರದಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿ; ಜನತಾ ದರ್ಶನದಲ್ಲಿ ಶಾಸಕ ಯು.ಬಿ.ಬಣಕಾರ ಸಲಹೆ

30 HVR 8 B
Published on

ಹಿರೇಕೆರೂರ: ಜನಸಾಮಾನ್ಯರು ಸಮಸ್ಯೆಗಳನ್ನು ಹಿಡಿದು ಅಧಿಕಾರಿಗಳನ್ನು ಕಾಣಲು ಕಚೇರಿಗೆ ಬಂದರೆ, ಅವರ ಸಮಸ್ಯೆಗಳನ್ನು ಸಮಚಿತ್ತದಿಂದ ಆಲಿಸಿ, ತ್ವರಿತವಾಗಿ ಪರಿಹರಿಸುವ ಕೆಲಸವಾಗಬೇಕು. ಕೇವಲ ನಿಯಮಗಳ ಪಾಲನೆ ಮಾಡದೇ ಮಾನವೀಯತೆಯ ಆಧಾರದಲ್ಲಿ ಕೆಲಸ ಮಾಡಬೇಕು ಎಂದು ಶಾಸಕ ಯು.ಬಿ.ಬಣಕಾರ ಅಧಿಕಾರಿಗಳಿಗೆ ಸಲಹೆ ನೀಡಿದರು.
ಹಿರೇಕೆರೂರ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾರಿಗೂ ನೋವಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಜನರ ಹಾಗೂ ಸರ್ಕಾರದ ಸೇತುವೆಯಾಗಿ ಕೆಲಸ ಮಾಡಬೇಕು. ಕಚೇರಿಗೆ ಬರುವವರು ನಿಮ್ಮನ್ನು ಹರಿಸಿದರೇ ಅಂತಹ ಪುಣ್ಯ ಮತ್ತೊಂದಿಲ್ಲ, ಶಪಿಸಿದರೆ ಅದರಂತ ಪಾಪ ಮತ್ತೊಂದಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದತೆ. ಇಬ್ಬರು ಸರಿಯಾಗಿ ಕಾರ್ಯನಿರ್ವಹಿಸಿದರೆ ರಾಮರಾಜ್ಯ ಸಾಧ್ಯ ಎಂದು ಹೇಳಿದರು.
ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮಾತನಾಡಿ, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆವಿಮೆ ಮಾಡಿಸಿದ್ದಕ್ಕಾಗಿ ಅಭಿನಂದಿಸುತ್ತೇನೆ. ಮಧ್ಯಂತರ ಬೆಳೆ ಪರಿಹಾರ ಪಡೆದ ಜಿಲ್ಲೆಗಳ ಪೈಕಿ ರಾಜ್ಯದಲ್ಲೇ ಹಾವೇರಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಗೆ 126 ಕೋಟಿ ರೂ. ಮಧ್ಯಂತರ ಬೆಳೆವಿಮೆ ಪರಿಹಾರ ಬಿಡುಗಡೆಯಾಗಿದೆ. ಬೆಳೆ ಪರಿಹಾರ ಪಡೆಯಲು ಸರ್ಕಾರದ ನಿಯಮದಂತೆ ಕಡ್ಡಾಯವಾಗಿ ರೈತರು ಫ್ರೂಟ್ ಐಡಿಯಲ್ಲಿ ತಮ್ಮ ಜಮೀನಿನ ವಿಸ್ತೀರ್ಣ ದಾಖಲಿಸಬೇಕು. ಈವರೆಗೆ ಜಿಲ್ಲೆಯಲ್ಲಿ ಶೇ.85ರಷ್ಟು ರೈತರ ನೋಂದಣಿ ಮಾಡಲಾಗಿದೆ. ಬಾಕಿ ಶೇ.15ರಷ್ಟು ರೈತರು ಕೂಡಲೇ ನೋಂದಾಯಿಸಿಕೊಳ್ಳಬೇಕು. ಸರ್ಕಾರ ಬರ ಪರಿಹಾರ ಹಣ ಬಿಡುಗಡೆ ಮಾಡಿದರೆ ರೈತರ ಖಾತೆಗೆ ಹಣ ವರ್ಗಾವಣೆಗೆ ಮಾಡಲು ಇದರಿಂದ ಸಹಕಾರಿಯಾಗಲಿದೆ ಎಂದರು.
ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಜಿ.ಮುಳ್ಳಳ್ಳಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ, ಉಪ ವಿಭಾಗಾಧಿಕಾರಿ ಚೆನ್ನಪ್ಪ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಇತ್ತೀಚೆಗೆ ಇ-ಸ್ವತ್ತು ಸಮಸ್ಯೆ ಹೆಚ್ಚಾಗುತ್ತಿದೆ
ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇ-ಸ್ವತ್ತು ಸಮಸ್ಯೆಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಗಾಂವಠಾಣಾ ವ್ಯಾಪ್ತಿಯಲ್ಲಿ ಮನೆ ನಿರ್ಮಾಣವಾಗಿದ್ದರೆ ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ಮಾಡಲು ಅವಕಾಶವಿದೆ. ಗಾಂವಠಾಣಾ ವ್ಯಾಪ್ತಿಯಿಂದ ಹೊರಗೆ ನಿರ್ಮಾಣದ ಮನೆಗಳಿಗೆ ಇ-ಸ್ವತ್ತು ಮಾಡಲು ಅವಕಾಶವಿಲ್ಲ. ಸರ್ಕಾರ ಹಂತದಲ್ಲಿ ಇದು ತೀರ್ಮಾನವಾಗಬೇಕು. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಈ ಕುರಿತು ತೀರ್ಮಾನವಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಹೇಳಿದರು.
ಗ್ರಾಮ ನಕಾಶೆಯಲ್ಲಿರುವ ಸರ್ಕಾರಿ ದಾರಿಗಳನ್ನು ಯಾರಾದರೂ ಮುಚ್ಚಿದರೆ ತೆರವುಗೊಳಿಸಬಹುದು. ಆದರೆ ಜಮೀನಿಗೆ ತೆರಳುವ ದಾರಿಗಳ ಸಮಸ್ಯೆಗೆ 20ರಿಂದ ಒಂದು ತಿಂಗಳ ಕಾಲ ತಾತ್ಕಾಲಿಕವಾಗಿ ದಾರಿ ಮಾಡಿಕೊಡಲು ಮಾತ್ರ ಅವಕಾಶವಿದೆ. ರಸ್ತೆಯಿಂದ ಹಿಂದಿನ ಭಾಗದಲ್ಲಿ ಜಮೀನು ಇರುವ ರೈತರು 300ರಿಂದ 400 ಮೀಟರ್ ಜಮೀನು ರಸ್ತೆಗೆ ಸರ್ಕಾರಕ್ಕೆ ಬಿಟ್ಟುಕೊಟ್ಟರೆ ಕ್ರಮವಹಿಸಬಹುದು. ಹಾಗಾಗಿ, ಸಂಬಂಧಪಟ್ಟ ರೈತರು ಈ ಕುರಿತು ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಅಥವಾ ಸಿವಿಲ್ ಕೋರ್ಟ್‌ನಲ್ಲಿ ಕೇಸ್ ಹಾಕಬಹುದು ಎಂದರು.
264 ಅರ್ಜಿ ಸ್ವೀಕಾರ :
ಜನತಾ ದರ್ಶನದಲ್ಲಿ ವಿವಿಧ ಇಲಾಖೆಗೆ ಸಂಬಂಧಪಟ್ಟ ಒಟ್ಟು 264 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಇ-ಸ್ವತ್ತು, ಹೊಲದ ದಾರಿ ಸಮಸ್ಯೆ ಹೆಚ್ಚಾಗಿದೆ. ಸ್ವೀಕೃತವಾದ ಅರ್ಜಿಗಳನ್ನು 15 ದಿನದೊಳಗಾಗಿ ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಡಿಸಿ ಗಡುವು ನೀಡಿದರು. ಮಾಶಾಸನಕ್ಕೆ ಸಂಬಂಧಪಟ್ಟ ಅರ್ಜಿಗಳನ್ನು ವಿಲೇವಾರಿ ಮಾಡಿ ಇಂದಿನ ಜನತಾದರ್ಶನದಲ್ಲೇ ಆದೇಶ ಪತ್ರ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net