

ಹಿರೇಕೆರೂರ: ತಾಲೂಕು ಚಿನ್ನಮುಳಗುಂದ ಗ್ರಾಮದ ಸುತ್ತಮುತ್ತ ಹಲವು ದಿನಗಳಿಂದ ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ಚಿರತೆ ಓಡಾಟ ನಡೆಸಿತ್ತು. ಆಗಾಗ ಸ್ಥಳೀಯರ ಕಣ್ಣಿಗೆ ಚಿರತೆ ಕಾಣುವ ಮೂಲಕ ಭಯದ ವಾತಾವರಣ ಸೃಷ್ಟಿಯಾಗಿತ್ತು. ಚಿರತೆಯ ಹೆಜ್ಜೆ ಗುರುತು ಪತ್ತೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇಟ್ಟಿದ್ದರು. ಈ ಬೋನಿಗೆ ಚಿರತೆ ಬಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಇದೇ ಭಾಗದಲ್ಲಿ ಚಿರತೆಯೊಂದು ಸೆರೆಯಾಗಿತ್ತು. ಇದೀಗ ಮತ್ತೊಂದು ಚಿರತೆ ಪತ್ತೆಯಾಗುವ ಮೂಲಕ ಆತಂಕ ಸೃಷ್ಟಿಸಿದೆ. ಈ ಬಗ್ಗೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ.