

ಹಿರೇಕೆರೂರ: ತಾಲೂಕು ಬಿಜೆಪಿ ಮಂಡಲ, ಜಿಲ್ಲಾ ರೈತ ಮೋರ್ಚಾ ವತಿಯಿಂದ ಮಾಜಿ ಸಚಿವ ಬಿ.ಸಿ. ಪಾಟೀಲ ನೇತೃತ್ವದಲ್ಲಿ ಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ತಾಲೂಕಿನ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಯಾವುದೇ ಕಾರಣಕ್ಕೂ ರಾಜಕೀಯ ಒತ್ತಡಕ್ಕೆ ಮಣಿಯದೆ, ಪಕ್ಷಪಾತ, ತಾರತಮ್ಯ ಮಾಡದೇ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಅಂಥ ಅಧಿಕಾರಿಗಳನ್ನು ಕೂಡಿ ಹಾಕಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ಮೊದಲು ಇಲ್ಲಿದ್ದ ಭ್ರಷ್ಟ ಅಧಿಕಾರಿಗಳನ್ನು ನನ್ನ ಅಧಿಕಾರದ ಅವಧಿಯಲ್ಲಿ ಬೇರೆ ಸ್ಥಳಕ್ಕೆ ವರ್ಗಾಯಿಸಲಾಗಿತ್ತು. ಈಗ ಮತ್ತೆ ಅಂತಹ ಅಧಿಕಾರಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ವಿದ್ಯುತ್ ದರ ಹೆಚ್ಚಳವಾಗಿದೆ. ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸಿದೆ. ನದಿಯಿಂದ ಕೆರೆ ತುಂಬಿಸುತ್ತಿಲ್ಲ. ಕಿಸಾನ್ ಸಮ್ಮಾನ್ ಹಣ ಬಿಡುಗಡೆ ಆಗಿಲ್ಲ. ವಿದ್ಯಾರ್ಥಿ ವೇತನ ಬಿಡುಗಡೆ ಮಾಡಿಲ್ಲ, ಗುತ್ತಿಗೆದಾರರ ಬಿಲ್ ಹಣ ನೀಡಿಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ರೈತರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. ತಕ್ಷಣವೇ ಅವರು ಅಧಿಕಾರದಿಂದ ಕೆಳಗಿಳಿಯಬೇಕು. ಈ ವರ್ಷ 2 ಬಾರಿ ಬೀಜ ಬಿತ್ತನೆ ಮಾಡಿದ ರೈತರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಾಜ್ಯ ಸರ್ಕಾರ ಇವರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಡಾ. ಪ್ರಭಾಕರಗೌಡ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಾಲಾಕ್ಷಗೌಡ ಪಾಟೀಲ, ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ರೈತ ಮೋರ್ಚಾ ಅಧ್ಯಕ್ಷ ಮನೋಹರ್ ವಡ್ಡಿನಕಟ್ಟಿ, ಜಿಲ್ಲಾ ಉಪಾಧ್ಯಕ್ಷ ಪರಮೇಶಣ್ಣ ಹಲಗೇರಿ, ಎನ್.ಎಂ. ಈಟೇರ, ಸೃಷ್ಟಿ ಪಾಟೀಲ, ಮಂಜುಳಾ ಬಾಳಿಕಾಯಿ, ಲತಾ ಬಣಕಾರ, ಗೀತಾ ದಂಡಗೀಹಳ್ಳಿ, ಪ್ರಕಾಶಗೌಡ ಗೌಡರ್, ರವಿಶಂಕರ ಬಾಳಿಕಾಯಿ, ಬಸವರಾಜ ಚಿಂದಿ, ಉಮೇಶ ಬಣಕಾರ, ಆನಂದಪ್ಪ ಹಾದಿಮನಿ, ಶಂಕ್ರಗೌಡ ಚನ್ನಗೌಡ್ರ, ಮಾಲತೇಶ ಗಂಗೋಳ, ದೇವರಾಜ ನಾಗಣ್ಣನವರ, ಹನುಮಂತ ಗಾಜೇರ, ಗಂಗಾಧರ ಮಾಗನೂರ, ಪದಾಧಿಕಾರಿಗಳು, ಕಾರ್ಯಕರ್ತರು, ರೈತರು, ಇದ್ದರು.