

ಗೋಕರ್ಣ: ಹತ್ತಿರದ ಹಿರೇಗುತ್ತಿಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಗ್ರಾಪಂ ಕಟ್ಟಡಕ್ಕೆ ಹೆಚ್ಚುವರಿ ಅನುದಾನ ಒದಗಿಸಿಕೊಡುವಂತೆ ಅಲ್ಲಿನ ಗ್ರಾಪಂ ವತಿಯಿಂದ ಶುಕ್ರವಾರ ಭೇಟಿಯಿತ್ತ ಕಾಂಗ್ರೆಸ್ ಮುಖಂಡ ನಿವೇದಿತ್ ಆಳ್ವಾ ಅವರನ್ನು ಆಗ್ರಹಿಸಲಾಯಿತು.
ಈಗಾಗಲೇ 20 ಲಕ್ಷ ರೂ. ಅನುದಾನದಿಂದ ಗ್ರಾಪಂ ಹೊಸ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಆದರೆ, ಇದರಲ್ಲಿ ಸಭೆ ನಡೆಸಲು ಯುಕ್ತ ಸ್ಥಳಾವಕಾಶ ಇರದಿರುವುದರಿಂದ ಸದಸ್ಯರ ಸಾಮಾನ್ಯ ಸಭೆ ನಡೆಸಲು ಅನನುಕೂಲವಾಗುವ ಸಾಧ್ಯತೆಯಿದೆ. ಕಾರಣ ಸದಸ್ಯರ ಸಭೆ ನಡೆಸಲು ಈ ಹೊಸ ಕಟ್ಟಡದ ಮೇಲಂತಸ್ತು ನಿರ್ಮಾಣ ಅತ್ಯಂತ ಅಗತ್ಯವಿದೆ. ಈ ಕುರಿತಾಗಿ ಈಗಾಗಲೇ ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕಾರಣ ಇದಕ್ಕೆ ಸರ್ಕಾರದಿಂದ ಹೆಚ್ಚುವರಿ ಅನುದಾನದ ವ್ಯವಸ್ಥೆ ಮಾಡಿಕೊಡಲು ಗ್ರಾಪಂ ವತಿಯಿಂದ ಅಧ್ಯಕ್ಷೆ ನಾಗರತ್ನಾ ಗಾಂವಕರ, ಉಪಾಧ್ಯಕ್ಷ ಶಾಂತ ನಾರಾಯಣ ನಾಯಕ ಮತ್ತು ಸದಸ್ಯರು ವಿನಂತಿಸಿಕೊಂಡರು.
ಹೊಸ ಕಟ್ಟಡವನ್ನು ವೀಕ್ಷಿಸಿ ಮಾತನಾಡಿದ ನಿವೇದಿತ್ ಆಳ್ವಾ, ಹಳೆಯದಾದ ಗ್ರಾಪಂ ಕಟ್ಟಡ ಸಾರ್ವಜನಿಕ ಉಪಯೋಗಕ್ಕೆ ತಕ್ಕುದಾಗಿಲ್ಲ. ಸಭೆ ನಡೆಸಲು ಹೊಸ ಕಟ್ಟಡದಲ್ಲಿ ಸ್ಥಳಾವಕಾಶದ ಅಭಾವವಿರುವ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಲ್ಲಿ ಈ ಬಗ್ಗೆ ವಿನಂತಿಸಿ ಸರ್ಕಾರದಿಂದ ಹೆಚ್ಚು ಅನುದಾನ ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು ಎಂದರು. ಗ್ರಾಪಂ ಸದಸ್ಯರಾದ ಮಹಾದೇವಿ ತಿಮ್ಮಣ್ಣ ಹಳ್ಳೇರ, ರಮಾಕಾಂತ ಹರಿಕಂತ್ರ, ಸವಿತಾ ವಿ.ಹಳ್ಳೇರ, ಇನಾಸ್ ಫರ್ನಾಂಡಿಸ್, ವೆಂಕಮ್ಮ ಹರಿಕಂತ್ರ, ಮಂಗಲಾ ಎಸ್.ಹಳ್ಳೇರ, ಕಾಂಗ್ರೆಸ್ ತಾಲೂಕು ಅಧ್ಯಕ್ಷ ಹೊನ್ನಪ್ಪ ನಾಯಕ, ವಿವಿಎಸ್ ಸಂಘದ ನಿರ್ದೇಶಕ ಉಮೇಶ ಗಾಂವಕರ ಮುಂತಾದವರಿದ್ದರು.