

ಗೋಕರ್ಣ:ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಗುತ್ತಿ ರಾಷ್ಟ್ರೀಯ ಹೆದ್ದಾರಿ 66ರ ಮೇಲೆ ಗುರುವಾರ ಬೆಳಗಿನ ಜಾವ ಒಂದೂವರೆ ಗಂಟೆ ಸುಮಾರಿಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸರಕು ತುಂಬಿದ್ದ ಲಾರಿಯೊಂದು ಮೊಗಚಿ ಬಿದ್ದು ಪೊಲೀಸ್ ಕಾವಲು ಕಾಯುತ್ತಿದ್ದ ಶೆಡ್ ಸಂಪೂರ್ಣ ಧ್ವಂಸವಾದ ಘಟನೆ ನಡೆದಿದೆ.ಈ ಶೆಡ್‌ನ ಒಳಗೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಶಿವಾನಂದ ಲಕ್ಷ್ಮಣ ಗೌಡ ಮತ್ತು ಗೃಹರಕ್ಷಕ ಸಿಬ್ಬಂದಿ ವಿಶ್ವನಾಥ ಮಂಗೇಶ್ಕರ್ ಎನ್ನುವವರು ಆಶ್ಚರ್ಯಕರವಾಗಿ ಬಚಾವಾಗಿದ್ದಾರೆ.ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ವೇಗವಾಗಿ ಬರುತ್ತಿದ್ದ ಮಹಾರಾಷ್ಟ್ರ ನೋಂದಣಿ ಹೊಂದಿರುವ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮೊದಲು ಹೆದ್ದಾರಿಯಲ್ಲಿದ್ದ ಬ್ಯಾರಿಕೇಡ್‌ಗೆ ಬಡಿಯಿತು.ನಂತರ ಬಲ ಮಗ್ಗುಲಾಗಿ ಮೊಗಚಿ ಬಿದ್ದ ಲಾರಿ ಶೆಡ್‌ಗೆ ಬಡಿದು ಶೆಡ್ ನಾಶವಾಗುವಂತಾಯಿತು.ಅಪಘಾತದಿಂದ ಪೊಲೀಸ್ ಸಿಬ್ಬಂದಿ ಶಿವಾನಂದ ಗೌಡ ಅವರ ಬಲಗಾಲು ಮತ್ತು ಮಂಡಿಗೆ ಪೆಟ್ಟಾಗಿದೆ.ಮುಂಜಾಗರೂಕತೆಯಿAದ ಇಬ್ಬರು ಸಿಬ್ಬಂದಿ ಶೆಡ್ ಆಚೆ ಹಾರಿ ಜೀವ ಉಳಿಸಿಕೊಂಡರು ಎನ್ನಲಾಗಿದೆ.
ಅಭದ್ರ ಶೆಡ್:ಪೊಲೀಸರು ದಿನದ 24 ಗಂಟೆ ಬಿಸಿಲು ಮಳೆಯಲ್ಲಿ ಕರ್ತವ್ಯ ನಿಭಾಯಿಸುವ ಈ ಶೆಡ್ ಯಾವುದೇ ಜೀವ ರಕ್ಷಕ ಭದ್ರತೆ ಹೊಂದಿರಲಿಲ್ಲ ಎನ್ನುವುದು ಈ ದುರ್ಘಟನೆಯಿಂದ ಬಯಲಾಗಿದೆ.ಕೇವಲ ಮೂರು ತಗಡಿನ ಶೀಟ್ ಬಳಸಿ ಶೆಡ್ ನಿರ್ಮಿಸಲಾಗಿತ್ತು.ಎಡ ಮತ್ತು ಬಲಕ್ಕೆ ಗೋಡೆ ಲೆಕ್ಕಕ್ಕೆ ಒಂದೊಂದು ಮತ್ತು ತಲೆಯ ಮೇಲೆ ಸೂರಿಗಾಗಿ ಒಂದ ಒಟ್ಟೂ ಮೂರು ಶೀಟ್‌ಗಳನ್ನೇ ಶೆಡ್ ಎಂದು ಕರೆಯಲಾಗುತ್ತಿತ್ತು.ಜೀವಕ್ಕೆ ಕನಿಷ್ಠ ಸುರಕ್ಷೆಯೂ ಇಲ್ಲದ ಈ ಶೆಡ್ಡೇ ಪೊಲೀಸ್ ಚೆಕ್ ಪೋಸ್ಟ್ ಆಗಿ ಬಳಸಲಾಗುತ್ತಿರುವುದು ವಿಪರ್ಯಾಸವಾಗಿದೆ.
ದೂರು ದಾಖಲು:ಘಟನೆಯ ಸಂಬಂಧ ಲಾರಿ ಚಾಲಕ ಪುಣೆಯ ಸಣಸವಾಡಿಯ ವಿಜಯ ಅಜಿತ ಪವಾರ ವಿರುದ್ಧ ಪ್ರಾಣಕ್ಕೆ ಹಾನಿಯಾಗುವಂತಹ ಅತಿವೇಗ ಮತ್ತು ನಿರ್ಲಕ್ಷತನದ ಚಾಲನೆ ಮಾಡಿ ಬ್ಯಾರಿಕೇಡ್ ಮತ್ತು ಚೆಕ್‌ಪೋಸ್ಟ್ ಶೆಡ್ ಹಾನಿ ಪಡಿಸಿ ಸಿಬ್ಬಂದಿಗೆ ನೋವು ಉಂಟುಮಾಡಿದ ಬಗ್ಗೆ ಪಿಎಸ್‌ಐ ಖಾದರ ಬಾಷಾ ಪ್ರಕರಣ ದಾಖಲಿಸಿದ್ದಾರೆ.